×
Ad

ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆ

Update: 2016-11-14 20:58 IST

ಮಂಜೇಶ್ವರ, ನ.14: ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಚಿಕಿತ್ಸೆಗೆಂದು ಮಾಡಿದ್ದ ಸಾಲ ತೀರಿಸಲಾಗದೆ ಮಕ್ಕಳ ತಂದೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳ್ಳೂರು ಬಳಿ ಸಂಭವಿಸಿದೆ.

ವಾಣಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಟೆಂಡರ್ ಬೆಳ್ಳೂರು ಪಂಚಾಯತ್‌ನ ಕಿನ್ನಿಂಗಾರು ಬಳಿಯ ಚಿಪ್ಲುಕೋಟೆ ನಿವಾಸಿ ಜಗನ್ನಾಥ ಪೂಜಾರಿ(53) ಎಂಬವರು ಮೃತ ವ್ಯಕ್ತಿ.

ರವಿವಾರ ಬೆಳಗ್ಗೆ ಮನೆ ಬಳಿಯ ತೋಟಕ್ಕೆ ತೆರಳಿದ ಜಗನ್ನಾಥ ಪೂಜಾರಿ ತುಂಬ ಹೊತ್ತಾದರೂ ಮರಳಿ ಬಾರದಿರುವುದರಿಂದ ಮನೆಯವರು ತೋಟಕ್ಕೆ ತೆರಳಿ ಹುಡುಕಾಡಿದಾಗ ಗೇರು ಮರದ ರೆಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಹಗ್ಗವನ್ನು ತುಂಡರಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲಾಗಲಿಲ್ಲ ಎಂದು ತಿಳಿದುಬಂದಿದೆ.

ಜಗನ್ನಾಥ ಪೂಜಾರಿಯವರ ಮಕ್ಕಳಾದ ಹರಿಕಿರಣ್(20), ಹರಿಸ್ಮಿತ(19) ಜನ್ಮತಃ ಅಂಧರಾಗಿದ್ದಾರೆ. ಇವರ ಕಣ್ಣಿನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಬೆಳ್ಳೂರು ಗ್ರಾಮ ಪಂಚಾಯತ್‌ನ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಇವರ ಹೆಸರು ಸೇರಿಸಲಾಗಿದೆ. ಆದರೆ ಎಂಡೋ ಸಂತ್ರಸ್ತರಿಗೆ ಲಭಿಸುವ ಪಿಂಚಣಿ ಸಾಕಾಗದೆ ಬ್ಯಾಂಕ್‌ಗಳಿಂದ ಲಕ್ಷಾಂತರ ರೂ. ಸಾಲ ಪಡೆದು ಜಗನ್ನಾಥ ಪೂಜಾರಿ ಚಿಕಿತ್ಸೆಗಾಗಿ ವ್ಯಯಿಸಿದ್ದರು. ಆದರೆ ಆರ್ಥಿಕ ಅಡಚಣೆಯಿಂದಾಗಿ ಸಾಲ ಮರು ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಸಾಲ ಮರು ಪಾವತಿಸಬೇಕೆಂದು ಬ್ಯಾಂಕ್‌ಗಳಿಂದ ನೋಟಿಸು ಬಂದಿರುವುದಾಗಿ ಸಂಬಂಧಿಕರು ತಿಳಿಸಿದ್ದು, ಇದರಿಂದಾಗಿ ಮನನೊಂದು ಜಗನ್ನಾಥ ಪೂಜಾರಿ ಆತ್ಮಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಜಗನ್ನಾಥ ಪೂಜಾರಿಯವರು ಪತ್ನಿ ರೇವತಿ, ಸಹೋದರ-ಸಹೋದರಿಯರನ್ನು ಅಗಲಿದ್ದಾರೆ. ಘಟನೆ ಕುರಿತು ಆದೂರು ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News