ವಿದ್ಯಾರ್ಥಿಗಳಿಗೆ ಜೋಗತಿ ನೃತ್ಯ ತರಬೇತಿ ನೀಡಿ: ಮಂಜಮ್ಮ ಜೋಗತಿ

Update: 2016-11-14 16:08 GMT

ಉಡುಪಿ, ನ.14: ಜೋಗತಿ ನೃತ್ಯವನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಅನುಭವಸ್ಥ ಜೋಗತಿ ನೃತ್ಯ ಕಲಾವಿದರುಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಗತಿ ನೃತ್ಯ ಕಲಾವಿದೆ ಮಂಜಮ್ಮ ಜೋಗತಿ ಹೇಳಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯ ಡಾ.ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠವು ಉಡುಪಿ ರಥಬೀದಿ ಗೆಳೆಯರು ಸಹಯೋಗದೊಂದಿಗೆ ಸೋಮ ವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಮಾತಾ ಮಂಜಮ್ಮ ಜೋಗತಿ ಮತ್ತು ತಂಡದಿಂದ ಜೋಗತಿ ನೃತ್ಯ-ಆತ್ಮಕಥೆ-ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕೇವಲ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವುದರಿಂದ ಯಾವುದೇ ಕಲಾ ಪ್ರಕಾರಗಳನ್ನು ಉಳಿಸಲು ಸಾಧ್ಯವಿಲ್ಲ. ಅದು ಶಾಲಾ ಕಾಲೇಜು ಮಕ್ಕಳಿಗೆ ತರಬೇತಿ ನೀಡುವುದರಿಂದ ಆ ಕಾರ್ಯ ಮಾಡಲು ಸಾಧ್ಯ. ಸರಕಾರ ಕಲಾವಿದರುಗಳಿಗೆ ನೀಡುವ ಮಾಸಾಶನಕ್ಕೆ ವರ್ಷದ ಮಿತಿಯನ್ನು ತೆಗೆಯ ಬೇಕು ಮತ್ತು ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಮಂಜುನಾಥ ಶೆಟ್ಟಿಯಾಗಿ ಹುಟ್ಟಿದ ನಾನು ಬೆಳೆಯುತ್ತ ಒಳಗಿನ ಹೆಣ್ಣಿನ ಭಾವನೆ ನನ್ನನ್ನು ತುಂಬಾ ಕಾಡುತಿತ್ತು. ಹೀಗಾಗಿ ನಾನು ಹೆಣ್ಣಾಗಿ ಪರಿವರ್ತನೆ ಹೊಂದಿದೆ. ಆಗ ನಾನು ತಂದೆ ತಾಯಿ ಮನೆಯವ ರಿಂದ ತೀರಾ ಶೋಷಣೆಗೆ ಒಳಗಾಗಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಬದುಕಿದೆ. ತಂದೆ ನನ್ನ ಮನೆಯಿಂದ ಹೊರ ಹಾಕಿದರು. ಮುಂದೆ ಸಮಾಜ ನನ್ನನ್ನು ತಾತ್ಸರ ಭಾವದಿಂದ ನೋಡಿತು. ಅಲ್ಲಿಯೂ ಸಾಕಷ್ಟು ಶೋಷಣೆಗೆ ಒಳಗಾದೆ. ಬಳಿಕ ಜೋಗತಿ ನೃತ್ಯ ತಂಡದೊಂದಿಗೆ ಸೇರಿ ಕಲಾವಿದೆಯಾದೆ. ಈಗ ನನ್ನಲ್ಲಿ ಹಣ ಇಲ್ಲದಿದ್ದರೂ ಹೆಸರು ಇದೆ. ಹಾಗಾಗಿ ಈಗ ಎಲ್ಲರೂ ನನ್ನ ಹತ್ತಿರ ಮಾಡಿಕೊಂಡಿದ್ದಾರೆ ಎಂದು ಅವರು ತಮ್ಮ ಆತ್ಮಕಥೆಯನ್ನು ಕಣ್ಣೀರಿಡುತ್ತ ಹೇಳಿದರು.

ಜೋಗತಿ ಪರಂಪರೆ ಕುರಿತು ಸಂಶೋಧಕ ಡಾ.ಅರುಣ ಜೋಳದ ಕೂಡ್ಲಿಗಿ ಉಪನ್ಯಾಸ ನೀಡಿ, ಜೋಗತಿ ಎಂಬುದು ನಾಥ ಪಂಥದಿಂದ ಶಕ್ತಿಯ ಆರಾಧನೆಯ ಹಿನ್ನೆಲೆಯಲ್ಲಿ ಬಂದ ಪರಂಪರೆಯಾಗಿದೆ. ಕರ್ನಾಟಕದಲ್ಲಿ ಎಲ್ಲಮ್ಮನ ಆರಾಧನೆಯ ಮೂಲಕ ಗುರುತಿಸಿಕೊಳ್ಳುವ ಈ ಪರಂಪರೆ ರಾಷ್ಟ್ರ ಹಾಗೂ ಜಾಗತಿಕ ಮಟ್ಟಕ್ಕೂ ವ್ಯಾಪಿಸಿದೆ. ಕೇರಳ, ತಮಿಳುನಾಡು, ಗುಜರಾತ್, ಅಜ್ಮೀರ್‌ಗಳಲ್ಲೂ ಈ ಪರಂಪರೆಯ ಆರಾಧನೆಗಳಿವೆ ಎಂದರು.

ಉತ್ತರ ಭಾರತದಲ್ಲಿ ಈ ಸಮುದಾಯವರಿಗೆ ಪೌರಾಣಿಕ ಹಿನ್ನೆಲೆ ಇರು ವುದರಿಂದ ಅಲ್ಲಿಯ ಜನ ಇವರನ್ನು ಗೌರವಿಸುತ್ತಾರೆ. ಹೀಗಾಗಿ ದಕ್ಷಿಣ ಭಾರತದ ಲಿಂಗಾಂತರಿಗಳು ಆ ಭಾಗಕ್ಕೆ ವಲಸೆ ಹೋಗುತ್ತಾರೆ. ಬಾಲ್ಯದಿಂದ ದೊಡ್ಡವರಾಗುವವರೆಗೆ ಮನೆ ಹಾಗೂ ಸಮಾಜದಿಂದ ಹಿಂಸೆಗೆ ಒಳಗಾಗುವ ಇವರು ಇಂದು ಗಂಡಸರನ್ನು ಕಂಡ ಕೂಡಲೇ ಕೆಂಡವಾಗುತ್ತಾರೆ. ಇದು ತಕ್ಷಣದ ಸಿಟ್ಟು ಅಲ್ಲ, ತಮ್ಮ ಬದುಕಿನ ನೋವಿನ ಸಂಕೇತವಾಗಿದೆ ಎಂದು ಅವರು ತಿಳಿಸಿದರು.

ಇವರನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮಾಜ ಸ್ವೀಕರಿ ಸಲು ಸಾಧ್ಯವಾಗುತ್ತದೆ. ಈ ಸಮುದಾಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇಂತವರು ಕೇವಲ ಕೆಳವರ್ಗದಲ್ಲಿ ಮಾತ್ರವಲ್ಲದೆ ಶ್ರೀಮಂತ ಕುಟುಂಬದಲ್ಲೂ ಇದ್ದಾರೆ. ಗಂಡು ಹೆಣ್ಣು ಆಗದಂತೆ ತಡೆಯುವ ಥೆರಫಿಯೂ ಪ್ರಸ್ತುತ ಅಮೆರಿಕಾದಲ್ಲಿ ಸಂಶೋಧಿಸಲಾಗಿದೆ. ಇದು ಅತ್ಯಂತ ದುಬಾರಿ ಚಿಕಿತ್ಸೆಯಾಗಿದ್ದು, ಇನ್ನು ಭಾರತಕ್ಕೆ ಬಂದಿಲ್ಲ ಎಂದರು.

ಕಾರ್ಯಕ್ರಮವನ್ನು ಸಾಹಿತ್ಯ ಪೀಠದ ಅಧ್ಯಕ್ಷೆ ವೈದೇಹಿ ಉದ್ಘಾಟಿಸಿದರು. ಮಣಿಪಾಲ ವಿವಿ ಗಾಂಧಿ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಥಬೀದಿ ಗೆಳೆಯರು ಅಧ್ಯಕ್ಷ ಮುರಳೀಧರ ಉಪಾಧ್ಯ ಸ್ವಾಗತಿಸಿದರು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜೋಗತಿ ನೃತ್ಯ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News