ನ.17ವರೆಗೆ ಮಂಗಳೂರಿನಲ್ಲಿ ರಂಗಾಯಣ ನಾಟಕೋತ್ಸವ

Update: 2016-11-14 18:30 GMT

ಮಂಗಳೂರು, ನ.14: ನಗರದ ಪುರಭವನದಲ್ಲಿ ರಂಗಾಯಣ ವತಿಯಿಂದ ಹಮ್ಮಿಕೊಳ್ಳಲಾದ ನಾಟಕಕೋತ್ಸವ ಹಾಗೂ ರಂಗಸಂವಾದ ಕಾರ್ಯಕ್ರಮವು ನ.14ರಿಂದ ನ.17ರವರೆಗೆ ನಡೆಯಲಿದೆ ಎಂದು ಕನ್ನಡ ಮತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಮೈಸೂರು ಇದರ ನಿರ್ದೇಶಕ ಕೆ.ಎ.ದಯಾನಂದ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

15ರಂದು ‘ಮಹಾಮಾಯಿ’, 16ರಂದು ‘ತಲೆದಂಡ’ ಹಾಗೂ 17ರಂದು ರಂಗ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಂಗಾ ಯಣದ ಇತ್ತೀಚಿನ ಯಶಸ್ವಿ ನಾಟಕ ‘ತಲೆದಂಡ’ ಆಳ್ವಾಸ್ ನುಡಿಸಿರಿ ಸಂಸ್ಕೃತಿ ಹಬ್ಬದಲ್ಲಿ ನ.18ರಂದು ಪ್ರದರ್ಶನ ಗೊಳ್ಳಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಈ ನಾಟಕ ರಚಿಸಿದ್ದಾರೆ. ಅಲ್ಲದೆ ನ.26ರಿಂದ 30ರವರೆಗೆ ಬೆಳಗಾವಿಯ ಪ್ರಸಿದ್ಧ ಕೆಎಲ್‌ಇ ಶಿಕ್ಷಣ ಸಂಸ್ಥೆ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದರು. ನಾಡಿನ ಮೂಲೆ ಮೂಲೆಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುವ ಉದ್ದೇಶದಿಂದ ‘ಯುವ ರಂಗ ಸಂಚಾರ’ ತಂಡವನ್ನು ರಚಿಸಲಾಗಿದ್ದು, ಈ ತಂಡದಲ್ಲಿ ಐವರು ಮಹಿಳೆಯರ ಸಹಿತ 15 ಮಂದಿ ಕಲಾವಿದರಿದ್ದಾರೆ ಎಂದರು.

ರಂಗಾಯಣ ಹಿರಿಯ ಕಲಾವಿದರೊಂದಿಗೆ ಸಮಾಲೋಚಿಸಿ ಈ ಬಾರಿಯ ನಾಟಕೋತ್ಸವವನ್ನು ಜ.13ರಿಂದ 19ರವರೆಗೆ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಕುರಿತು ನಾಟಕೋತ್ಸವ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು, ಸಂಚಾಲಕರಾಗಿ ಎಸ್.ರಾಮನಾಥ್ ಮತ್ತು ಜಗದೀಶ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.

ಕಲಾವಿದರ ಆಯ್ಕೆ

ರಂಗ ಸಂಚಾರದಲ್ಲಿ ಕಲಾವಿದರಾಗಿ ಕೆಲಸ ಮಾಡ ಬಯಸುವ ಅಭ್ಯರ್ಥಿಗಳು ಸ್ವ ಅರ್ಜಿ ಮೂಲಕ ತಮ್ಮ ವೈಯಕ್ತಿಕ ವಿವರಗಳನ್ನು ಒಳಗೊಂಡ ಮಾಹಿತಿ ನೀಡಿ ನ.26ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಕನಿಷ್ಠ ವಿದ್ಯಾರ್ಹತೆ ಪಿಯುಸಿ ಅಥವಾ ತತ್ಸಮಾನ. 28 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಯಾವುದಾದರೂ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದಿರಬೇಕು. ರಂಗಾಯಣದ ರಂಗ ಶಾಲೆಯಲ್ಲಿ ಡಿಪ್ಲೊಮಾ ಪಡೆದವರಿಗೆ ಮೊದಲ ಆದ್ಯತೆ. ಡಿ.4ರಂದು ಬೆಳಗ್ಗೆ 10ಕ್ಕೆ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.

ಆಯ್ಕೆಯಾದ ಅಭ್ಯರ್ಥಿಯು ಡಿ.8ರಂದು ರಂಗಾಯಣದ ರಂಗಸಂಚಾರ ಘಟಕದಲ್ಲಿ ಹಾಜರಿರಬೇಕು. ಅಭ್ಯರ್ಥಿಗಳಿಗೆ ಮಾಹೆಯಾನ 15,000 ರೂ. ವೇತನ ಹಾಗೂ ಉಚಿತ ವಸತಿ ಸೌಕರ್ಯ ಕಲ್ಪಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News