ಮೀನುಗಾರ ಮಹಿಳೆಯರಿಗೆ ವಂಚನೆ: ದೂರು
ಕಾಪು, ನ.14: ರಾಷ್ಟ್ರೀಕೃತ ಬ್ಯಾಂಕ್‌ನ ಮೂಲಕ ಮಹಿಳೆಯರು ಸ್ಥಳೀಯ ಮೀನುಗಾರರ ಸಹಕಾರ ಸಂಘದ ಧೃಢಪತ್ರದೊಂದಿಗೆ ಪಡೆದ ಸಾಲದ ಅರ್ಧಪಟ್ಟು ಹಣವನ್ನು ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿಗೆ ನೀಡಿದ್ದು, ಇದೀಗ ಅವರು ವಂಚನೆ ಮಾಡಿದ್ದಾರೆ ಎಂದು ಸಂಘದ ಮಹಿಳೆಯರು ಆರೋಪಿಸಿದ್ದಾರೆ. ಘಟನೆಯ ವಿವರ: ಕಾಪು, ಮಜೂರು, ಮಲ್ಲಾರು, ರಾಣ್ಯಕೇರಿ, ಉದ್ಯಾವರದ ನಿವಾಸಿ ಮಹಿಳೆಯರು ಕಾಪು ಪಡುಗ್ರಾಮದ ಸುಪ್ರಿತಾ ಯಾನೆ ಸಂಗೀತ ಎಂಬವರ ಮೂಲಕ ಕಾಪು ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಶೇಖರ್ ಸುವರ್ಣ ನೀಡಿರುವ ಧೃಢಪತ್ರದೊಂದಿಗೆ ತಲಾ 50,000 ರೂ.ನಂತೆ ಮೀನುಗಾರ ಮಹಿಳೆಯರಿಗೆ ಸಿಗುವ ಸಾಲವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.
ಸಾಲ ಪಡೆಯಲು ಆವಶ್ಯಕವಾಗಿ ಬೇಕಾದ ಧೃಡಪತ್ರವನ್ನು ನೀಡುವ ಸಂದರ್ಭ ಮಹಿಳೆಯರಲ್ಲಿ ಪ್ರತೀ ಸಾಲಕ್ಕೆ 25 ಸಾವಿರ ರೂ.ನಂತೆ ತನಗೆ ಕೊಡಬೇಕು. ನಾನು ಪಡೆದುಕೊಂಡ ಹಣವನ್ನು ನಾನೇ ಬ್ಯಾಂಕ್‌ಗೆ ಜಮಾಯಿಸುತ್ತೇನೆ ಎಂದು ಶೇಖರ್ ಸುವರ್ಣ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಸುಪ್ರೀತಾ ಯಾನೆ ಸಂಗೀತ ತಿಳಿಸಿರುವಂತೆ ಮಹಿಳೆಯರು ತಾವು ಪಡೆದ ಸಾಲದಲ್ಲಿ 25,000 ರೂ. ನಂತೆ ಒಟ್ಟು 13 ಲಕ್ಷ ರೂ. ವನ್ನು ಸುಪ್ರಿತಾ ಮೂಲಕ ಶೇಖರ್ ಸುವರ್ಣರಿಗೆ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ಹಣ ಪಡೆದುಕೊಂಡ ಶೇಖರ್ ಸುವರ್ಣ ಮೂರು ತಿಂಗಳು ಮಾತ್ರ ಹಣವನ್ನು ಕಟ್ಟಿದ್ದು, ಉಳಿದಂತೆ ಹಣವನ್ನು ಕಟ್ಟಿರಲಿಲ್ಲ. ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗದ್ದರಿಂದ ಬ್ಯಾಂಕ್‌ನವರು ಸಾಲಗಾರ ಮಹಿಳೆಯರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಮಹಿಳೆಯರು ಶೇಖರ್ ಸುವರ್ಣ ಅವರ ಬಳಿ ಕೇಳಿದಾಗ ನಾನು ಹಣವನ್ನು ಪಡೆದಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ. ಆದರೆ ಸುಪ್ರಿತಾ13 ಲಕ್ಷ ರೂ.ವನ್ನು ಶೇಖರ್ ಸುವರ್ಣ ಅವರಿಗೆ ನೀಡಿದ್ದೇನೆ ಎಂದು ತಿಳಿಸಿದ್ದರು. ಈ ಬಗ್ಗೆ ಸಂಶಯಗೊಂಡ ಮಹಿಳೆಯರು ಕಾಪು ಪೊಲೀಸರ ಸಹಿತವಾಗಿ ಹಲವರಿಗೆ ದೂರು ನೀಡಿದ್ದಾರೆ.