×
Ad

ಟ್ರಂಪ್ ಎಫೆಕ್ಟ್: ಅಮೆರಿಕಕ್ಕೆ ವಿದ್ಯಾರ್ಥಿಗಳ ವಲಸೆ ಕುಸಿತ?

Update: 2016-11-15 00:12 IST
  ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ನೂತನ ಸಂಪುಟದ ಸಿಬ್ಬಂದಿ ವರಿಷ್ಠರಾಗಿ ರೀನ್ಸ್ ಪ್ರೀಬಸ್ ಅವರನ್ನು ಸೋಮವಾರ ನೇಮಿಸಿದ್ದಾರೆ. ನವೆಂಬರ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಜಯೋತ್ಸವ ರ್ಯಾಲಿಯಲ್ಲಿ ಟ್ರಂಪ್‌ರನ್ನು ರೀನ್ಸ್ ಅಭಿನಂದಿಸುತ್ತಿರುವ ಫೈಲ್ ಚಿತ್ರ.

ಹ್ಯೂಸ್ಟನ್,ನ.14: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಗೆಲುವಿನಿಂದಾಗಿ, ವಿದೇಶಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಆಮೆರಿಕಕ್ಕೆ ಆಗಮಿಸುವುದು ಕಡಿಮೆಯಾಗಲಿದೆ ಹಾಗೂ ಇದರಿಂದಾಗಿ ಅಮೆರಿಕದ ಅರ್ಥಿಕತೆಗೆ 35 ಶತಕೋಟಿ ಡಾಲರ್‌ಗಿಂತಲೂ ಅಧಿಕ ನಷ್ಟವಾಗಲಿದೆಯೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಅವರು ವಲಸಿಗರ ಸಂಖ್ಯೆಯನ್ನು ನಿರ್ಬಂಧಿಸುವುದು, ಮೆಕ್ಸಿಕೊ ಗಡಿಯಲ್ಲಿ ವಲಸೆ ತಡೆಗೆ ಗೋಡೆ ನಿರ್ಮಾಣ ಮತ್ತು ಮುಸ್ಲಿಮರ ಕಡ್ಡಾಯ ನೋಂದಣಿ ಇತ್ಯಾದಿ ನಿಲುವುಗಳನ್ನು ಪ್ರಕಟಿಸಿರುವುದು ಅನೇಕ ವಿದೇಶಿ ವಿದ್ಯಾರ್ಥಿಗಳನ್ನು ಅಮೆರಿಕದಿಂದ ವಿಮುಖಗೊಳಿಸಿರುವುದಾಗಿ ಸಮೀಕ್ಷೆಯೊಂದು ತಿಳಿಸಿದೆ.

    

ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ನಡೆಸಲಾದ ಈ ಸಮೀಕ್ಷೆಯು ಒಂದು ವೇಳೆ ಟ್ರಂಪ್ ಜಯಗಳಿಸಿದಲ್ಲಿ ಅಮೆರಿಕಕ್ಕೆ ಆಗಮಿಸಲು ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಹೆಚ್ಚಿನ ಅಸಕ್ತಿಯನ್ನು ಹೊಂದಿಲ್ಲವೆಂದು ಹೇಳಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ಸೇರ್ಪಡೆ ಕಂಪೆನಿಗಳಾದ ಎಫ್‌ಪಿಪಿ, ಇಡಿಯು ಮೆಡಿಯಾ ಹಾಗೂ ಇನ್‌ಸ್ಟೆಡ್ 118 ದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು. 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಟ್ರಂಪ್ ಅಧ್ಯಕ್ಷರಾದಲ್ಲಿ ಅಮೆರಿಕಕ್ಕೆ ಬರಲು ತಮಗೆ ಆಸಕ್ತಿಯಿಲ್ಲವೆಂದು ಶೇ. 60 ವಿದ್ಯಾರ್ಥಿಗಳು ಉತ್ತರಿಸಿದ್ದರು. ಒಂದು ವೇಳೆ ಟ್ರಂಪ್ ಎದುರಾಳಿ ಹಿಲರಿ ಕ್ಲಿಂಟನ್ ಗೆದ್ದಲ್ಲಿ ಅಮೆರಿಕಕ್ಕೆ ಬರುವ ಇಚ್ಛೆಯಿಲ್ಲವೆಂದು ಕೇವಲ ಶೇ.3.8 ವಿದ್ಯಾರ್ಥಿಗಳಷ್ಟೇ ಹೇಳಿದ್ದರು.

    ಪ್ರಸ್ತುತ ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ದಾಖಲೆಯ ಮಟ್ಟಕ್ಕೆ ತಲುಪಿದೆ. ಆದರೆ ಅಧ್ಯಕ್ಷರಾಗಿ ಟ್ರಂಪ್ ಅವರ ಆಯ್ಕೆಯು ಈ ಮಾರುಕಟ್ಟೆಯ ಬೆಳವಣಿಗೆಯನ್ನು ನಿಧಾನಗೊಳಿಸಲಿದೆ ಹಾಗೂ ಅಮೆರಿಕದ ಆರ್ಥಿಕತೆಗೆ ವಾರ್ಷಿಕವಾಗಿ ಆ ಮೂಲಕ ದೊರೆಯುತ್ತಿದ್ದ 35 ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆಯುಂಟಾಗಲಿದೆಯೆಂದು ಸಮೀಕ್ಷೆಯು ಎಚ್ಚರಿಕೆ ನೀಡಿದೆ.

 ಪ್ರಸ್ತುತ ಅಮೆರಿಕದಲ್ಲಿ 10.44 ಲಕ್ಷ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಚೀನಾ ಹಾಗೂ ಭಾರತದಿಂದ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಅಲ್ಲಿಗೆ ಆಗಮಿಸುತ್ತಿದ್ದಾರೆ. ಸೌದಿ ಅರೇಬಿಯ ಮೂರನೆ ಸ್ಥಾನದಲ್ಲಿದೆ. ಸರಕಾರಿ ನೆರವಿನ ವಿದ್ಯಾರ್ಥಿವೇತನ ಯೋಜನೆಯ ಮೂಲಕ ಗಣನೀಯ ಸಂಖ್ಯೆಯ ಸೌದಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

 ರಿಪಬ್ಲಿಕನ್ ನಾಯಕ ರೀನ್ಸ್ ಟ್ರಂಪ್ ಸಂಪುಟಕ್ಕೆ: ಅಮೆರಿಕದ ನಿಯೋಜಿತ ಅಧ್ಯಕ್ಷರಾಗಿ ತನ್ನ ಸಂಪುಟ ರಚನೆ ಪ್ರಕ್ರಿಯೆಯನ್ನು ಆರಂಭಿಸಿರುವ ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದ ಉನ್ನತ ನಾಯಕ ರೀನ್ಸ್ ಪ್ರೀಬಸ್ ಅವರನ್ನು ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ತನ್ನ ಚುನಾವಣಾ ಪ್ರಚಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ್ದ ಸ್ಟೀಫನ್ ಬ್ಯಾನೊನ್ ಅವರನ್ನು ಮುಖ್ಯ ಕಾರ್ಯತಂತ್ರಜ್ಞರಾಗಿ ನೇಮಕ ಮಾಡಿದ್ದಾರೆ.

ಟ್ರಂಪ್ ಅವರು ಅಮೆರಿಕದ 45ನೆ ಅಧ್ಯಕ್ಷರಾಗಿ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ನಿಲ್ಲಿಸಲು ಬೆಂಬಲಿಗರಿಗೆ ಟ್ರಂಪ್ ಮನವಿ:  

ಚುನಾವಣೆಯಲ್ಲಿ ತನ್ನ ಗೆಲುವಿನ ಬಳಿಕ ಮುಸ್ಲಿಮರು, ಆಫ್ರಿಕನ್ ಮೂಲದ ಅಮೆರಿಕನ್ನರು ಹಾಗೂ ಲ್ಯಾಟಿನ್ ಸಂಜಾತರಿಗೆ ಕಿರುಕುಳ ಪ್ರಕರಣಗಳು ಉಲ್ಬಣಿಸಿವೆಯೆಂಬ ವರದಿಗಳ ಬಗ್ಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಇದೇ ಮೊದಲ ಬಾರಿಗೆ ಈ ಬಗ್ಗೆ ಬಹಿರಂಗವಾಗಿ ಹೇಳಿಕೆಯೊಂದನ್ನು ನೀಡಿದ್ದು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಟ್ರಂಪ್ ರವಿವಾರ ಸಿಬಿಎಸ್ ಸುದ್ದಿವಾಹಿನಿಯ 60 ಮಿನಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ , ‘‘ ಅವರಿಗೆ(ಅಲ್ಪಸಂಖ್ಯಾತರು) ನೋವುಂಟು ಮಾಡಲು ನಾನು ಬಯಸುತ್ತಿಲ್ಲ. ಅವರು ತುಂಬಾ ಒಳ್ಳೆಯ ಜನರು. ಅವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಇದನ್ನು ನಾನು ಕ್ಯಾಮರಾದ ಮುಂದೆಯೇ ಹೇಳುತ್ತೇನೆ ಎಂದರು.

 ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಮುಸ್ಲಿಮರು, ಹಿಸ್ಪಾನಿಕ್ ಅಮೆರಿಕನ್ನರು, ಕರಿಯ ಜನಾಂಗೀಯರು, ಮೂಲನಿವಾಸಿಗಳ ಮೇಲೆ ದ್ವೇಷದ ಹಲ್ಲೆ ಪ್ರಕರಣಗಳು ಉಲ್ಬಣಿಸಿರುವ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವವರಿಗೆ ನೀವು ಏನಾದರೂ ಹೇಳಬಯಸುತ್ತೀರಾ ಎಂದು ಅವರನ್ನು ಪ್ರಶ್ನಿಸಿದಾಗ, ‘‘ ಹಾಗೆ ಮಾಡಬೇಡಿ ಎಂದು ನಾನು ಹೇಳುತ್ತಿದ್ದೇನೆ. ಇದು ತುಂಬಾ ಕೆಟ್ಟದು. ಯಾಕೆಂದರೆ ನಾನು ದೇಶವನ್ನು ಒಗ್ಗೂಡಿಸಲು ಹೊರಟಿದ್ದೇನೆ’’ ಎಂದು ಟ್ರಂಪ್ ಹೇಳಿದರು.

ಟ್ರಂಪ್ ವೇತನ ಕೇವಲ 1 ಡಾಲರ್!

 ಚೊಚ್ಚಲ ರಾಜಕೀಯ ಪ್ರವೇಶದಲ್ಲೇ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಬಿಲಿಯಾಧೀಶ ಉದ್ಯಮಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಹುದ್ದೆಗೆ ದೊರೆಯುವ 4 ಲಕ್ಷ ಡಾಲರ್‌ಗಳ ವೇತನವನ್ನು ಪಡೆದುಕೊಳ್ಳದಿರಲು ನಿರ್ಧರಿಸಿದ್ದಾರೆ.

‘‘ಈ ವೇತನವನ್ನು ನಾನು ಪಡೆದು ಕೊಳ್ಳುವುದಿಲ್ಲ’’ ಎಂದವರು ಸಿಬಿಎಸ್ ಟಿವಿ ವಾಹಿನಿಯ ಸಂದರ್ಶನದಲ್ಲಿ ದೃಢಪಡಿಸಿದ್ದಾರೆ. ‘‘ ಆದರೆ ಕನಿಷ್ಠ 1 ಡಾಲರ್ ವೇತನವನ್ನಾದರೂ ಪಡೆಯಬೇಕೆಂದು ಕಾನೂನು ಹೇಳುತ್ತದೆ. ಹೀಗಾಗಿ ನಾನು ವರ್ಷಕ್ಕೆ 1 ಡಾಲರ್ ವೇತನವನ್ನು ಪಡೆಯುತ್ತೇನೆ ’’ಎಂದು ಟ್ರಂಪ್ ತಿಳಿಸಿದ್ದಾರೆ.

ತಾನು ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ 4 ಲಕ್ಷ ಡಾಲರ್ ವೇತನವನ್ನು ಸ್ವೀಕರಿಸುವುದಿಲ್ಲವೆಂದು ಟ್ರಂಪ್, ಚುನಾವಣಾ ಪ್ರಚಾರದ ವೇಳೆ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News