×
Ad

ಹಿಲರಿ ವಿರುದ್ಧ ತನಿಖೆಯ ಯೋಚನೆಯಿಲ್ಲ: ಟ್ರಂಪ್ ಸ್ಪಷ್ಟನೆ

Update: 2016-11-15 00:14 IST

ವಾಶಿಂಗ್ಟನ್,ನ.14: ತನ್ನ ಚುನಾವಣಾ ಎದುರಾಳಿಯಾಗಿದ್ದ ಹಿಲರಿ ಕ್ಲಿಂಟನ್ ವಿರುದ್ಧ ದ ಆರೋಪಗಳ ತನಿಖೆಗಾಗಿ ವಿಶೇಷ ಅಭಿಯೋಜಕ (ಪ್ರಾಸಿಕ್ಯೂಟರ್) ನನ್ನು ನೇಮಿಸುವ ಕುರಿತು ತಾನಿನ್ನೂ ಯಾವುದೇ ಯೋಚನೆ ಮಾಡಿಲ್ಲವೆಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅದರ ಬದಲು ಗಡಿಭದ್ರತೆ ಹಾಗೂ ಅಮೆರಿಕವನ್ನು ಕಾಡುತ್ತಿರುವ ನಿರುದ್ಯೋಗ, ಆರೋಗ್ಯ ಹಾಗೂ ವಲಸೆಯಂತಹ ಪ್ರಮುಖ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಲು ತಾನು ಬಯಸುತ್ತಿರುವುದಾಗಿ ಅವರು ಹೇಳಿದ್ದಾರೆ.

   ರವಿವಾರ ಪ್ರಸಾರವಾದ ಸಿಬಿಎಸ್ ಟಿವಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂದರ್ಭ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾನು ಮಹತ್ವದ ವಲಸೆ ನಿಯಂತ್ರಣ ಮಸೂದೆಯನ್ನು ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ಅವರು ಹೇಳಿದ್ದಾರೆ.

ಕ್ಲಿಂಟನ್ ವಿರುದ್ಧ ತನಿಖೆಗಾಗಿ ವಿಶೇಷ ಪ್ರಾಸಿಕ್ಯೂಟರ್‌ನನ್ನು ನೇಮಕ ಮಾಡುವ ಬದಲು ತಾನು ದೇಶವನ್ನು ‘ಸರಿಪಡಿಸಲು’ ಬಯಸುತ್ತಿದ್ದೇನೆಂದು ಅವರು ಹೇಳಿದರು.

ಚುನಾವಣೆಯಲ್ಲಿ ತನ್ನ ಗೆಲುವಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್ ‘‘ಒಂದು ವೇಳೆ ನಾನು ಸೋತು ಹಿಲರಿ ಗೆದ್ದಿದ್ದೇ ಆದಲ್ಲಿ, ಆಗ ನನ್ನ ಜನರು ಪ್ರತಿಭಟನೆ ನಡೆಸಿದಲ್ಲಿ ಇದು ತೀರಾ ಕೆಟ್ಟದೆಂದು ಎಲ್ಲರೂ ನಿಂದಿಸುತ್ತಿದ್ದರು. ಆದರೆ ಈಗ ವಿಭಿನ್ನವಾದ ಪ್ರವೃತ್ತಿ ಕಂಡುಬರುತ್ತಿದೆ. ಇಲ್ಲಿ ದ್ವಂದ್ವ ನಿಲುವು ಎದ್ದು ಕಾಣುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News