ಉಳ್ಳಾಲಪೇಟೆಯಲ್ಲಿ ಮಸೀದಿಯ ಮೇಲೆ ಕಲ್ಲು ತೂರಾಟ
ಉಳ್ಳಾಲ, ನ.15: ಉಳ್ಳಾಲ ಪೇಟೆಯ ಬಸ್ತಿಪಡ್ಪುವಿನಲ್ಲಿರುವ ರಹ್ಮಾನಿಯಾ ಮಸೀದಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಹಾನಿಗೊಳಿಸಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ನಡೆದಿದೆ.
ಕಳೆದ ಹಲವು ದಿನಗಳಿಂದ ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿದ್ದು ನಿಷೇಧಾಜ್ಞೆ ಜಾರಿಯಲ್ಲಿದ್ದರೂ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಕೈರಂಗಳದಲ್ಲಿ ಮದ್ರಸಕ್ಕೆ ತೆರಳುತ್ತಿದ್ದ ಬಾಲಕನಿಗೆ ಚೂರಿ ಇರಿತ ಪ್ರಕರಣ ನಡೆದ ಸೋಮವಾರ ತಡರಾತ್ರಿಯೇ ಉಳ್ಳಾಲ ಪೇಟೆಯ ಮಸೀದಿಗೂ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದಾರೆ.
ಮಂಗಳವಾರದಂದು ಬೆಳಗ್ಗೆ ಸ್ಥಳೀಯರು ನಮಾಝ್ ನಿರ್ವಹಿಸಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ಬಾಗಿಲು ಹಾಕಿ ತೆರಳಿದ ಬಳಿಕ ಈ ಘಟನೆ ನಡೆದಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದ್ದು, ಹಿಂಬದಿಯಿಂದ ಕಿಟಕಿ ಗಾಜುಗಳಿಗೆ ಕಲ್ಲೆಸೆದು ಹಾನಿ ನಡೆಸಲಾಗಿದೆ. ಪ್ರಾರ್ಥನೆ ನಡೆಸುವ ಸ್ಥಳದಲ್ಲಿ ಗಾಜಿನ ಪುಡಿ ಹರಡಿಕೊಂಡಿದ್ದು, ಕಲ್ಲುಗಳು ಅಲ್ಲೇ ಬಿದ್ದಿದ್ದವು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದರು. ಸ್ಥಳಕ್ಕೆ ಹಿರಿಯ ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲ ಸೆಂಟ್ರಲ್ ಕಮಿಟಿಯಿಂದ ದೂರು ದಾಖಲು
ಕೊಣಾಜೆ ಹಾಗೂ ಕುತ್ತಾರು ಪ್ರದೇಶಗಳಲ್ಲಿ ದುಷ್ಕೃತ್ಯಗಳನ್ನು ಎಸಗುತ್ತಿರುವವರು ಅದನ್ನು ಉಳ್ಳಾಲಕ್ಕೂ ಹರಡಲು ಯತ್ನಿಸುತ್ತಿದ್ದಾರೆ. ಅದಕ್ಕೂ ಮುನ್ನ ದುಷ್ಕರ್ಮಿಗಳನ್ನು ಬಂಧಿಸಬೇಕು. ಉಳ್ಳಾಲದಲ್ಲಿ ಗಲಭೆ ಆರಂಭವಾದರೆ ಅದನ್ನು ನಿಲ್ಲಿಸುವುದೇ ಕಷ್ಟ. ಹಿಂದಿನಿಂದ ಈ ಭಾಗದ ಜನತೆ ಅಪಾರ ಸಾವು ನೋವು, ಆಸ್ತಿ ಹಾನಿಯೂ ಸಂಭವಿಸಿದೆ. ಕೂಡಲೇ ಸಂಬಂಧಿಸಿದ ಇಲಾಖೆ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಶ್ರಮ ವಹಿಸಬೇಕಿದೆ ಎಂದು ಉಳ್ಳಾಲ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅನ್ವರ್ ಹುಸೈನ್ ಹೇಳಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ದೂರು ದಾಖಲಿಸಿದ ಅವರು ಹಿಂದಿನಿಂದಲೂ ಮಸೀದಿಗಳಿಗೆ ಕಲ್ಲು ತೂರಾಟ ನಡೆಯುತ್ತಲೇ ಇದೆ. ಆದರೆ ದುಷ್ಕರ್ಮಿಗಳ ಪತ್ತೆ ಆಗುತ್ತಿಲ್ಲ. ಇದರಿಂದ ಘಟನೆಗಳು ಮರುಕಳಿಸುತ್ತಿದೆ. ಇದರಿಂದ ಸಾಮರಸ್ಯದಿಂದ ಬಾಳುವ ಮಂದಿಯ ನಡುವೆ ಕೆಡುಕು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದರು