ನೋಟು ನಿಷೇಧದ ನಂತರ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲೆಸೆತ ನಿಂತಿದೆ: ಪಾರಿಕ್ಕರ್
ಹೊಸದಿಲ್ಲಿ,ನ. 15: ಹಳೆ ನೋಟುಗಳನ್ನು ಚಲಾವಣೆಯಿಂದ ವಾಪಸು ಪಡೆದ ಕ್ರಮದಿಂದಾಗಿ ಕಾಶ್ಮೀರದಲ್ಲಿ ಸೇನೆಯ ವಿರುದ್ಧ ಕಲ್ಲೆಸೆಯುವ ಘಟನೆಗಳನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ ಎಂದು ವರದಿಯಾಗಿದೆ.
’ಹಿಂದೆ ಭದ್ರತಾ ಅಧಿಕಾರಿಗಳ ವಿರುದ್ದ ಕಲ್ಲಸೆಯುವುದಕ್ಕೆ 500ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನದ್ದನ್ನು ಮಾಡಿದರೆ 1000ರೂಪಾಯಿ ಕೂಲಿಯಾಗಿ ಪ್ರತ್ಯೇಕತಾವಾದಿಗಳು ನೀಡುತ್ತಿದ್ದರು. ನೋಟು ನಿಷೇಧದಿಂದ ಈ ಸಮಸ್ಯೆ ಇಲ್ಲವಾಗಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದನ್ನು ಕಡಿಮೆಗೊಳಿಸುವುದಕ್ಕೂ ಸಾಧ್ಯವಾಗಿದೆ ಎಂದು ಪಾರಿಕ್ಕರ್ ಹೇಳಿದ್ದಾರೆ.
ಮುಂಬೈಯ ಬಿಜೆಪಿ ಶಾಸಕ ಅತುಲ್ ಭಟ್ಕಾಲ್ಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ಗಡಿಭದ್ರತೆಯಲ್ಲಿಯೂ ನರೇಂದ್ರ ಮೋದಿಯ ತೀರ್ಮಾನ ಬಲಿಷ್ಠವಾದುದು. ಭಯೋತ್ಪಾದಕ ಕೃತ್ಯಗಳನ್ನು ಪ್ರಾಯೋಜಿಸುವವರಿಗೆ ನೋಟು ಅಮಾನ್ಯಗೊಳಿಸಿದ ಕ್ರಮ ತಿರುಗೇಟಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಸಲು ಪಾಕಿಸ್ತಾನದಿಂದ 500,1000 ರೂಪಾಯಿ ಕಪ್ಪು ಹಣ ಧಾರಾಳವಾಗಿ ಉಪಯೋಗಿಸಲಾಗುತ್ತಿದೆ ಎಂದು ಇಂಟಲಿಜೆನ್ಸ್ ವರದಿಯಿತ್ತು.