×
Ad

ಇನ್ನು ಮುಂದೆ ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳುವವರ ಬೆರಳಿಗೆ ಅಳಿಸಲಾಗದ ಶಾಯಿ ಗುರುತು

Update: 2016-11-15 14:15 IST

ಹೊಸದಿಲ್ಲಿ,ನ.15: ಹಳೆಯ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯಿಸಿಕೊಳ್ಳಲು ಪದೇ ಪದೇ ಬ್ಯಾಂಕ್ ಶಾಖೆಗಳಿಗೆ ನುಗ್ಗುವವರಿಗೊಂದು ಆಘಾತಕಾರಿ ಸುದ್ದಿಯಿಲ್ಲಿದೆ. ಈ ಹಾವಳಿಯನ್ನು ತಡೆಯಲು ಹಣವನ್ನು ಬದಲಿಸಿ ಕೊಳ್ಳುವವರ ಬೆರಳಿಗೆ ಅಳಿಸಲಾಗದ ಶಾಯಿಯ ಗುರುತನ್ನು ಹಾಕಲಾಗುವುದೆಂದು ಕೇಂದ್ರವು ಇಂದು ಪ್ರಕಟಿಸಿದೆ. ನೋಟು ನಿಷೇಧ ಕುರಿತಂತೆ ಹಲವಾರು ತಪ್ಪು ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವುಗಳನ್ನು ನಂಬದಂತೆ ಅದು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ.

 ಬ್ಯಾಂಕುಗಳಲ್ಲಿ ಜನಸಂದಣಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರಕಾರವು ಈ ನೂತನ ಕ್ರಮವನ್ನು ಪ್ರಕಟಿಸಿದೆ. ಜನರು ಹಲವಾರು ಬಾರಿ ಬ್ಯಾಂಕುಗಳಿಗೆ ತೆರಳಿ ತಮ್ಮ ಕಪ್ಪುಹಣವನ್ನು ಬಿಳಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ತಿಳಿಸಿದರು. ಇಂದಿನಿಂದಲೇ ಪ್ರಮುಖ ನಗರಗಳಲ್ಲಿ ಈ ಕ್ರಮ ಜಾರಿಗೆ ಬರುತ್ತಿದ್ದು, ಮತದಾನದ ಮಾದರಿಯಲ್ಲಿ ಕ್ಯಾಷ್ ಕೌಂಟರ್‌ಗಳಲ್ಲಿ ಹಣ ಪಡೆದುಕೊಂಡವರ ಬೆರಳಿಗೆ ಅಳಿಸಲಾಗದ ಶಾಯಿಯ ಗುರುತನ್ನು ಹಾಕಲಾಗು ವುದು ಎಂದರು.

ಜನರು ಆತಂಕ ಪಟ್ಟುಕೊಳ್ಳಬೇಕಾಗಿಲ್ಲ ಎಂಬ ಸರಕಾರದ ಮನವಿಯನ್ನು ಪುನರುಚ್ಚ ರಿಸಿದ ಅವರು, ಪರಿಸ್ಥಿತಿ ದಿನೇದಿನೇ ಸುಧಾರಿಸುತ್ತಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ನೋಟುಗಳು ಲಭ್ಯವಿವೆ. ಸರಕಾರವು ಪರಿಸ್ಥಿತಿಯ ಮೇಲೆ ಸತತ ನಿಗಾಯಿರಿಸಿದೆ ಎಂದರು.

ಕೆಲವು ಸಂಸ್ಥೆಗಳು ಮುಷ್ಕರ ನಡೆಸುತ್ತಿವೆ ಎಂಬಂತಹ ಹಲವಾರು ಸುಳ್ಳುಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜನರು ಇವುಗಳನ್ನು ನಂಬಬಾರದು ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News