ಮರಳು ಅಭಾವ: ಸಿವಿಲ್ ಗುತ್ತಿಗೆದಾರರಿಂದ ನ.16ರಂದು ಪ್ರತಿಭಟನೆ
ಭಟ್ಕಳ, ನ.15: ತಾಲೂಕಿನಲ್ಲಿ ಮರಳಿ ಸಮಸ್ಯೆಯಿಂದಾಗಿ ಕಟ್ಟಡ ಕೂಲಿ ಕಾರ್ಮಿಕರು ಕೆಸಲವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ 5-6 ತಿಂಗಳಿಂದ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡು ಜನಸಾಮಾನ್ಯರು ಕಟ್ಟಡ ಕಟ್ಟದಂತಾಗಿದೆ ಈ ಹಿನ್ನೆಲೆಯಲ್ಲಿ ನ.16ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಭಟ್ಕಳ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ.ನಾಯ್ಕ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭಟ್ಕಳ ತಾಲೂಕಿನಾದ್ಯಂತ ಮರಳು ಪೂರೈಕೆ ಮತ್ತೆ ಪ್ರಾರಂಭವಾಗಬೇಕೆಂದು ಆಗ್ರಹಿಸಿ ನ.16ರಂದು ಭಟ್ಕಳ ತಾಲೂಕಿನ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಸಹಾಯಕ ಆಯುಕ್ತರ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಮರಳಿನ ಕೊರತೆಯಿಂದಾಗಿ ಇಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಇನ್ನು ಕಟ್ಟಡ ಕೂಲಿ ಕಾರ್ಮಿಕರಿಗೆ ಕಳೆದ 5 ರಿಂದ 6 ತಿಂಗಳಿಂದ ಕೆಲಸ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಕಳೆದ ಕೆಲವು ದಿನಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸೇರಿ ಮರಳಿನ ಸ್ಥಗಿತದ ವಿರುದ್ಧ ಹೋರಾಟಿ ಪ್ರತಿಭಟಿಸಿ ಸರಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿಕೊಂಡಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ಪ್ರತಿಭಟನೆಯ ಮುಂದಾಳತ್ವವನ್ನು ಭಟ್ಕಳ ಕಟ್ಟಡ ಕೂಲಿ ಕಾರ್ಮಿಕರ ಸಂ ವಹಿಸಲಿದ್ದು, ತಾಲೂಕ ಸಿವಿಲ್ ಗುತ್ತಿಗೆದಾರರ ಸಂಘ, ಸೆಂಟ್ರಿಂಗ್ ಮಾಲಕ-ಕಾರ್ಮಿಕರ ಸಂಘ, ಪೇಂಟಿಂಗ್ ಕೂಲಿ ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಭಟ್ಕಳ ಘಟಕ, ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ, ಮಜ್ಲಿಸೆ ಇಸ್ಲಾಮ್-ವ-ತಂಝಿಂ ಸಂಸ್ಥೆ,ಲಾರಿ ಮಾಲಕರ ಚಾಲಕರ ಸಂಘವೂ ಬೆಂಬಲ ಸೂಚಿಸಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಟ್ಕಳ ಕಟ್ಟಡ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜಟ್ಟಪ್ಪನಾಯ್ಕ, ಪೇಂಟಿಂಗ್ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ, ಸೆಂಟ್ರಿಂಗ್ ಮಾಲಕ ಕಾರ್ಮಿಕರ ಸಂಘ ಅಧ್ಯಕ್ಷ ಗಣಪತಿ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಭಟ್ಕಳ ಘಟಕದ ಅಧ್ಯಕ್ಷ ಈಶ್ವರ ನಾಯ್ಕ ಬೈಲೂರು ಉಪಸ್ಥಿತರಿದ್ದರು.