ಸಿಂಗಾಪುರದಲ್ಲಿ ಸಾಹಿತ್ಯ ಸ್ಪರ್ಧೆ: ಆರ್.ಎಸ್.ನಾಯಕ್‌ಗೆ ಬಹುಮಾನ
ಭಟ್ಕಳ, ನ.15: ಸಿಂಗಾಪುರದಲ್ಲಿ ಅಕ್ಟೋಬರ್ 29 ಮತ್ತು 30ರಂದು ನಡೆದ ಸಿಂಗಾರ ಸಂಸ್ಕೃತಿ ಸಮ್ಮೇಳನದ ಪ್ರಯುಕ್ತ ಹಮ್ಮಿಕೊಂಡ ’ಸಿಂಚನ ಸಾಹಿತ್ಯ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ಅಂಜುಮನ್ ಕಾಲೇಜಿನ ಉಪನ್ಯಾಸಕ ಪ್ರೊ.ಆರ್. ಎಸ್.ನಾಯಕ್ ಕಥೆ ಮತ್ತು ಕವನ ಸ್ಪರ್ಧೆಗಳೆರಡರಲ್ಲೂ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಭಟ್ಕಳವಷ್ಟೇ ಅಲ್ಲ, ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಸಜ್ಜನಿಕೆ ಮತ್ತು ಗಟ್ಟಿತನವನ್ನು ಮೈಗೂಡಿಸಿಕೊಂಡಿರುವ ಆರ್.ಎಸ್.ನಾಯಕ್, ಈಗಾಗಲೇ 3 ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ತನ್ನನ್ನು ತೆರೆದುಕೊಂಡಿದ್ದಾರೆ. ಪ್ರಚಾರದಿಂದ ದೂರವೇ ಉಳಿದು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಅವರು ಉತ್ತಮ ವಿಮರ್ಶಕರೂ ಆಗಿದ್ದಾರೆ. ಸಿಂಗಾಪುರ ಕನ್ನಡ ಸಂಘವು ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಕನ್ನಡಿಗರಿಗಾಗಿ ಮತ್ತು ಅನಿವಾಸಿ ಕನ್ನಡಿಗರಿಗಾಗಿ ಏರ್ಪಡಿಸಿದ್ದು, ಕನ್ನಡಿಗರಿಗಾಗಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಬಾಗಲಕೋಟೆಯ ಹನುಮಂತ ಹಾಲಗೇರಿಯವರ ’ಅಂಟು ಜಾಡ್ಯ’ ಕಥೆ ಮೊದಲ ಸ್ಥಾನವನ್ನು ಪಡೆದರೆ, ಕವನ ವಿಭಾಗದಲ್ಲಿ ಸಿದ್ದಾಪುರದ ಚೈತ್ರಿಕಾ ಶ್ರೀಧರ ಹೆಗಡೆಯವರ ’ಅವಳ ಬಿಳಿ ನೆರಳು ಮತ್ತು ಅಳಿಸುವ ಚಿತ್ರಗಳು’ ಕವನಕ್ಕೆ ಪ್ರಥಮ ಬಹುಮಾನ ಸಂದಿದೆ. ಪ್ರೊ.ಆರ್.ಎಸ್.ನಾಯಕ್‌ರ ಕಥೆ ’ಆತ ಬಂದ’ ಮತ್ತು ಕವಿತೆ ’ಪಾತಿಮಾನಂದನ’ ದ್ವಿತೀಯ ಬಹುಮಾನ ಪಡೆದುಕೊಂಡಿವೆ. ಅನಿವಾಸಿ ಕನ್ನಡಿಗರಿಗಾಗಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಯುನೈಟೆಡ್ ಕಿಂಗ್ಡಮ್‌ನ ಡಾ.ಪ್ರೇಮಲತಾ ಬಿ. ಅವರ ’ಸ್ವಾತಂತ್ರ್ಯ’ ಕಥೆ ಪಡೆದರೆ, ದ್ವಿತೀಯ ಬಹುಮಾನವನ್ನು ಅಮೆರಿಕದ ಜಮುನಾ ರಾಣಿ ಎಚ್. ಎಸ್. ಅವರ ’ಹೊಸ ಕನಸು’ ತನ್ನದಾಗಿಸಿಕೊಂಡಿದೆ. ಕವನ ವಿಭಾಗದಲ್ಲಿ ಸಿಂಗಾಪುರದ ಮಹೇಶ ಪ್ರೇಮಚಂದ್ರ ಅವರ ’ಅಂಕೋರ್ ವಾಟ್‌ನ ಸೂರ್ಯೋದಯ’ ಮೊದಲ ಬಹುಮಾನ ಪಡೆದರೆ, ಅಮೆರಿಕದ ಜಮುನಾ ರಾಣಿ ಎಚ್. ಎಸ್. ಅವರ ’ಉಸಿರು ಮಾರುವ ಕಿನ್ನರಿ’ಗೆ ಎರಡನೆಯ ಬಹುಮಾನ ದೊರೆತಿದೆ. ತೃತೀಯ ಬಹುಮಾನ ಸಿಂಗಾಪುರದ ಲೋಕೇಶ್ವರಿ ಜ. ನಾ. ಅವರ ’ಮನಸ್ಸಿನ ಮುಖಗಳು’ ಕವಿತೆಯ ಪಾಲಾಗಿದೆ. ವಿಶ್ವಮಟ್ಟದ ಈ ಸ್ಪರ್ಧೆಯ ತೀರ್ಪುಗಾರರಾಗಿ ಕನ್ನಡದ ಖ್ಯಾತ ಕಥೆಗಾರ, ವಿಮರ್ಶಕ ಜೋಗಿ (ಗಿರೀಶ್ ರಾವ್ ಹತ್ಯಾರ್) ಮತ್ತು ಪ್ರಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಭಾಗವಹಿಸಿದ್ದರು.