ಈ ವೆಸ್ಪಾ 946 ಸ್ಕೂಟರ್ ನ ಬೆಲೆ ಎಷ್ಟು ಎಂದು ಊಹಿಸುವುದು ನಿಮಗೆ ಅಸಾಧ್ಯ !
ಪುಣೆ,ನ.15: ಇಟಲಿಯ ಪ್ರತಿಷ್ಠಿತ ಟು ವೀಲರ್ ಬ್ರಾಂಡ್ ಪಿಯಾಜಿಯೊ ತನ್ನ ಅತ್ಯಂತ ವಿಶಿಷ್ಟ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರ್‌ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಪುಣೆಯಲ್ಲಿ ಇದರ ಶೋರೂಮ್ ಬೆಲೆ 12,04,970 ರೂ.ಮಾತ್ರ!
ಕಳೆದ ವರ್ಷ ಪಿಯಾಜಿಯೊ ಸಮೂಹದ 130ನೇ ಮತ್ತು ಪ್ರಖ್ಯಾತ ಫ್ಯಾಷನ್ ಬ್ರಾಂಡ್ ಜಾರ್ಜಿಯೊ ಅರ್ಮಾನಿಯ 40ನೇ ವರ್ಷಾಚರಣೆಯ ಅಂಗವಾಗಿ ಈ ಸ್ಕೂಟರ್ ಬಿಡುಗಡೆಗೊಂಡಿತ್ತು. ವೆಸ್ಪಾ 946 ನೂತನ ವಿಶೇಷ ಆವೃತ್ತಿಯ ಜೊತೆಗೆ ಪಿಯಾಜಿಯೊ ಇಂಡಿಯಾ ತನ್ನ 70ನೇ ವರ್ಷಾಚರಣೆಯ ಅಂಗವಾಗಿ ವೆಸ್ಪಾ ಸ್ಕೂಟರ್‌ನ್ನೂ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಪುಣೆಯಲ್ಲಿ ಇದರ ಶೋರೂಮ್ ಬೆಲೆ 96,500 ರೂ.
ಇಷ್ಟೊಂದು ಭಾರಿ ಬೆಲೆಯೊಂದಿಗೆ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಭಾರತ ದಲ್ಲಿ ಎಪ್ರಿಲಿಯಾ ಎಸ್‌ಆರ್‌ವಿ 850 ಎಬಿಎಸ್ ನಂತರ ಅತ್ಯಂತ ದುಬಾರಿ ಸ್ಕೂಟರ್ ಎಂಬ ಹೆಗ್ಗಳಿಕೆ ಹೊಂದಿದೆ. ಹಾಗೆಯೇ ಇದು ಅತ್ಯಂತ ದುಬಾರಿ ವೆಸ್ಪಾ ಸ್ಕೂಟರ್ ಕೂಡ ಹೌದು. ಗ್ರಾಹಕರಿಂದ ಬೇಡಿಕೆಗಳನ್ನು ಅವಲಂಬಿಸಿ ಸಂಪೂರ್ಣವಾಗಿ ಸಿದ್ಧ ಗೊಂಡೇ ಇದು ಭಾರತವನ್ನು ತಲುಪುತ್ತದೆ. ಭಾರತದ ಇಬ್ಬರು ಗ್ರಾಹಕರು ಈಗಾಗಲೇ ಇದನ್ನು ಬುಕ್ ಮಾಡಿದ್ದಾರೆ.
ವಿನ್ಯಾಸ ಮತ್ತು ಶೈಲಿಯ ಕುರಿತು ಹೇಳುವುದಾದರೆ ವೆಸ್ಪಾ 946 ಎಂಪೋರಿಯೊ ಅರ್ಮಾನಿ 1946ರ ಮಾಡೆಲ್‌ನ ವೆಸ್ಪಾ ಸ್ಕೂಟರ್‌ಗಳಿಂದ ಸ್ಫೂರ್ತಿಯನ್ನು ಪಡೆದಿದ್ದು, ಸ್ಕೂಟರ್ ವಿಭಾಗದಲ್ಲಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.