ತನಿಖೆಯಲ್ಲಿ ಅನೈತಿಕತೆ ಸಾಬೀತಾದರೆ ಕ್ರಮ: ದಿನೇಶ್ ಗುಂಡೂರಾವ್

Update: 2016-11-15 13:19 GMT

ಉಡುಪಿ, ನ.15: ಅಶ್ಲೀಲ ಚಿತ್ರ ವೀಕ್ಷಣೆ ಸಂಬಂಧ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ ಹಾಗೂ ತನ್ವೀರ್ ಸೇಠ್ ಕೂಡ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ಆದುದರಿಂದ ತನ್ವೀರ್ ಸೇಠ್ ಉದ್ದೇಶ ಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಈ ಚಿತ್ರ ವೀಕ್ಷಣೆ ಮಾಡಿದ್ದಾರೆಯೇ ಎಂಬ ಸತ್ಯ ಶ್ರೀಘ್ರವೇ ಹೊರಬರಲಿದೆ. ಇದರಲ್ಲಿ ಅನೈತಿಕತೆ ಕಂಡುಬಂದಲ್ಲಿ ಅವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ಚಿತ್ರ ವೀಕ್ಷಣೆ ಸಂಬಂಧ ಬಿಜೆಪಿ ಪ್ರಕರಣಕ್ಕೂ ತನ್ವೀರ್ ಸೇಠ್ ಪ್ರಕರಣಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಬಿಜೆಪಿಯ ಮೂವರು ಮಂತ್ರಿಗಳು ಅಸೆಂಬ್ಲಿ ಒಳಗಡೆ ಉದ್ದೇಶಪೂರ್ವಕವಾಗಿ 15-20ನಿಮಿಷಗಳ ಅಶ್ಲೀಲ ಚಿತ್ರವನ್ನು ನೋಡಿದ್ದರು ಎಂದರು.
 
ಆರ್ಥಿಕತೆಗೆ ಹೊಡೆತ

ಚುನಾವಣೆಯ ಪೂರ್ವದಲ್ಲಿ ನರೇಂದ್ರ ಮೋದಿಯವರಷ್ಟು ಖರ್ಚು ಮಾಡಿದವರು ಬೇರೆ ಯಾರು ಇಲ್ಲ. ಶ್ರೀಮಂತರ ಜೊತೆ ಸೇರಿ ಚುನಾವಣಾ ಪ್ರಚಾರ ಮಾಡಿದ ಇವರು ಕಾಂಗ್ರೆಸ್‌ಗಿಂತ ಹೆಚ್ಚು ಖರ್ಚು ಮಾಡಿದ್ದರು. ಇಷ್ಟು ದೊಡ್ಡ ಮಟ್ಟದ ಹಣ ಇವರಿಗೆ ಎಲ್ಲಿಂದ ಬಂತು ಎಂಬುದೇ ಪ್ರಶ್ನೆ. ಇದೀಗ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಗಳಲ್ಲಿ ಯಾವುದೇ ಸಾಧನೆ ಮಾಡದ ಮೋದಿ ನೋಟು ರದ್ದುಗೊಳಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

80ಲಕ್ಷ ಕೋಟಿ ರೂ. ಕಪ್ಪು ಹಣ ವಾಪಸ್ಸು ತರುವ ಪ್ರಯತ್ನ ಈವರೆಗೆ ಆಗಿಲ್ಲ. ನೋಟು ರದ್ದುಗೊಳಿಸುವುದರೊಂದಿಗೆ ದೊಡ್ಡ ಸಾಧನೆ ಮಾಡುತ್ತಿ ದ್ದೇವೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇದರಿಂದ ನಮ್ಮ ಆರ್ಥಿಕತೆ ಮೇಲೆ ಭಾರೀ ದೊಡ್ಡ ಪರಿಣಾಮ ಬೀರುತ್ತಿದೆ. ಜನಸಾಮಾನ್ಯ ತೊಂದರೆಗೆ ಒಳಗಾಗಿದ್ದಾರೆ. ಆದರೆ ಕಪ್ಪು ಹಣ ಮಾಡಿಕೊಂಡಿರುವ ಶ್ರೀಮಂತರು ನಿಶ್ಚಿಂತೆ ಯಲ್ಲಿ ಇದ್ದಾರೆ ಎಂದು ಅವರು ತಿಳಿಸಿದರು.

ಅದ್ದೂರಿ ಮದುವೆ ಸರಿಯಲ್ಲ

ಜನಾರ್ದನ ರೆಡ್ಡಿ ಮಗಳ ಅದ್ದೂರಿ ಮದುವೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಇರುವಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ಹಣ ಖರ್ಚು ಮಾಡು ವುದು ಸರಿಯಲ್ಲ. ಆದರೂ ಇದು ಅವರ ವೈಯಕ್ತಿಕ ವಿಚಾರ. ಖರ್ಚು ಮಾಡುವುದು ಅವರ ದುಡ್ಡು. ಹೀಗಾಗಿ ನಾವು ಆ ಬಗ್ಗೆ ಏನು ಹೇಳುವಂತೆ ಇಲ್ಲ. ಕಾನೂನಾತ್ಮಕವಾಗಿ ಅದ್ದೂರಿ ಮದುವೆ ಮಾಡಬಾರದೆಂಬುದಿಲ್ಲ. ಆದರೆ ಇದು ನೈತಿಕ ಪ್ರಶ್ನೆಯಾಗಿದೆ. ಇಂತಹ ಬರಗಾಲದ ಸ್ಥಿತಿ ಹಾಗೂ ಜನರು ಸಂಕಷ್ಟದಲ್ಲಿರುವ ಬಗ್ಗೆ ರಾಜಕಾರಣಿಗಳೇ ಬಹಳ ಸೂಕ್ಷ್ಮವಾಗಿ ನೋಡಬೇಕಾಗಿದೆ ಎಂದು ದಿನೇಶ್ ಗಂಡೂರಾವ್ ಹೇಳಿದರು.

ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕುವ ಕಾನೂನು ಜಾರಿಗೆ ತರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ರಾಜ್ಯದ ಸರಕಾರದ ಮುಂದೆ ಚಿಂತನೆ ಇತ್ತು. ಆದರೆ ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದ್ದವು. ಅಲ್ಲದೆ ಈ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳೂ ಕೂಡ ವ್ಯಕ್ತವಾಯಿತು. ಆದುದ ರಿಂದ ಈ ಕಾನೂನು ರೂಪಿಸುವ ಬಗ್ಗೆ ಮುಂದೆ ಯಾವ ರೀತಿ ಅಂತಿಮ ತೀರ್ಮಾನ ಆಗುತ್ತದೆ ಎಂಬುದು ನೋಡಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಫೋನ್ ಮೂಲಕ ಸಂಪರ್ಕ ಮಾಡಿದ್ದೆ. ಈ ಬಗ್ಗೆ ಅಂತಿಮ ತೀರ್ಮಾನ ಏನು ಎಂಬುದನ್ನು ಕಾದು ನೋಡಬೇಕಾಗಿದೆ. ಈಗಲೇ ಆ ಬಗ್ಗೆ ನನಗೆ ಏನು ಹೇಳಲು ಆಗಲ್ಲ ಎಂದು ತಿಳಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನೇಮಕದ ಕುರಿತಾಗಿ ಡಿಸೆಂಬರ್ ತಿಂಗಳೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News