ಜಿಲ್ಲಾ ವಕ್ತಾರ, ಸಾಮಾಜಿಕ ಜಾಲತಾಣ ಸಂಯೋಜಕರ ನೇಮಕ: ದಿನೇಶ್ ಗುಂಡೂರಾವ್

Update: 2016-11-15 13:23 GMT

ಉಡುಪಿ, ನ.15: ಬಿಜೆಪಿ ಬಹಳ ವ್ಯವಸ್ಥಿತವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳುಗಳನ್ನು ಹೇಳಿ ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ಪ್ರತ್ಯುತ್ತರ ನೀಡಿ ಜನರಿಗೆ ಸತ್ಯ ಹೇಳುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪಕ್ಷದ ವಕ್ತಾರರನ್ನು ಮತ್ತು ಪ್ರತಿ ತಾಲೂಕುಗಳಲ್ಲಿ ಸಾಮಾಜಿಕ ಜಾಲತಾಣ ಸಂಯೋಜಕರನ್ನು ನೇಮಕ ಮಾಡಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ನ.19ರಂದು ನಡೆಯಲಿರುವ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಸಮಾರಂಭದ ಕುರಿತು ಮಂಗಳವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬಿಜೆಪಿ ಸುಳ್ಳುಗಳನ್ನು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಕಪ್ಪು ಹಣ ತರುವುದಾಗಿ ಹೇಳಿದ ಮೋದಿ ಎರಡೂವರೆ ವರ್ಷಗಳಾದರೂ ಅದರತ್ತ ಗಮನ ಕೊಡಲೇ ಇಲ್ಲ. 2ಸಾವಿರ ನೋಟುಗಳನ್ನು ಹೊರ ತರುವ ಮೂಲಕ ಕಪ್ಪು ಹಣ ಕೂಡಿ ಇಡಲು ಇನ್ನಷ್ಟು ಸುಲಭ ದಾರಿ ಮಾಡಿಕೊಡ ಲಾಗಿದೆ. ಇವರ ಪರ ಇರುವವರು ದೇಶಾಭಿಮಾನಿಗಳು, ವಿರುದ್ಧ ಇರುವ ವರು ದೇಶದ್ರೋಹಿಗಳೆಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು ಎಂದರು.

ದೇಶಕ್ಕೆ ಬಹಳ ಗಟ್ಟಿಯಾದ ನಾಯಕತ್ವ ನೀಡಿದ ಇಂದಿರಾ ಗಾಂಧಿ ಆ ಕಾಲ ಸೃಷ್ಟಿಸಿದ ಪಕ್ಷದ ಓಟು ಬ್ಯಾಂಕ್ ಈಗಲೂ ಇದೆ. ಈ ದೇಶದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹೀಗಾಗಿ ನಾವು ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದವರು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಮುಖಂಡರಾದ ಜಿ.ಎ.ಬಾವ, ಸತೀಶ್ ಅಮೀನ್ ಪಡುಕೆರೆ, ಕೃಷ್ಣರಾಜ ಸರಳಾಯ, ನರಸಿಂಹಮೂರ್ತಿ, ವರೋನಿಕಾ ಕರ್ನೆಲಿಯೋ, ಚಂದ್ರಿಕಾ ಶೆಟ್ಟಿ, ನವೀನ್ ಚಂದ್ರಶೆಟ್ಟಿ, ಜಿಪಂ ಸದಸ್ಯರಾದ ಸುಧಾಕರ ಶೆಟ್ಟಿ, ಚಂದ್ರಿಕಾ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕೇಶವ ಕೋಟ್ಯಾನ್, ಸುಧೀರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಸುನೀಲ್ ಬಂಗೇರ, ಅಝೀಝ್ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News