ಡಿ.23ರಿಂದ ಕರಾವಳಿ ಉತ್ಸವ: ಸಚಿವ ರೈ

Update: 2016-11-15 13:31 GMT

ಮಂಗಳೂರು, ನ.15: ಕರಾವಳಿಯ ಜಾನಪದ ಮತ್ತು ಸಾಂಸ್ಕೃತಿಕ ವೈಭವವನ್ನು ಸಾರುವ ಕರಾವಳಿ ಉತ್ಸವವವು ಈ ಬಾರಿ ಡಿ.23ರಿಂದ ಜ.1ರ ತನಕ ಕದ್ರಿ ಪಾರ್ಕ್, ಕರಾವಳಿ ಉತ್ಸವ ಮೈದಾನ ಮತ್ತು ಪಿಲಿಕುಳ ನಿಸರ್ಗಧಾಮದಲ್ಲಿ ಜರಗಿಸಲಾಗುವುದು ಎಂದು ಸಚಿವ ರೈ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರಾವಳಿ ಉತ್ಸವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ಸವದ ಯಶಸ್ಸಿಗೆ ಸಚಿವ ರಮಾನಾಥ ರೈಯ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ, ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಸಮಿತಿ, ವಸ್ತುಪ್ರದರ್ಶನ ಸಮಿತಿ, ಮೆರವಣಿಗೆ ಸಮಿತಿ, ಆರ್ಥಿಕ ಸಮಿತಿ, ವಿಶೇಷವಾಗಿ ಎಲ್ಲ ಕಾಲೇಜುಗಳ ವಿದ್ಯಾರ್ಥಿ ಸಂಘದ ಅಧ್ಯಕ್ಷರನ್ನು ಒಳಗೊಂಡ ಯುವ ಉತ್ಸವ ಸಮಿತಿ, ಎಲ್ಲ ತಾಲೂಕು ಮಟ್ಟದ ಉತ್ಸವ ಸಮಿತಿ ಸೇರಿದಂತೆ 14 ಸಮಿತಿಗಳನ್ನು ರಚಿಸಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾಹಿತಿ ನೀಡಿದರು.

ಡಿ.23ರಂದು ಸಂಜೆ ವೈಭವದ ಮೆರವಣಿಗೆ ಬಳಿಕ ಕದ್ರಿ ಪಾರ್ಕ್ ಬಳಿ ಕರಾವಳಿ ಉತ್ಸವಕ್ಕೆ ಚಾಲನೆ ನೀಡಲು ಮತ್ತು ಅಲ್ಲಿ ಪ್ರತಿದಿನ ಹಾಗೂ ಕರಾವಳಿ ಉತ್ಸವ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಡಿ.24,25ರಂದು ಪಿಲಿಕುಳ ನಿಸರ್ಗಧಾಮದಲ್ಲಿ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು, ಗುತ್ತಿನ ಮನೆ ಮತ್ತು ಸಾಂಸ್ಕೃತಿಕ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ, ಕಂಬಳ ಸಮಿತಿ ಸಭೆ ನಡೆಸಿ, ಕಂಬಳದ ದಿನಾಂಕ ನಿಗದಿಪಡಿಸಲು ನಿರ್ಧರಿಸಲಾಯಿತು. ಡಿ.30,31 ಮತ್ತು ಜ.1ರಂದು ಪಣಂಬೂರು ಬೀಚ್‌ನಲ್ಲಿ ವಿವಿಧ ಕ್ರೀಡೆ, ಆಹಾರ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಬೀಚ್ ಉತ್ಸವ ನಡೆಸಲು, ಆಕರ್ಷಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ವಸ್ತುಪ್ರದರ್ಶನ ಮೈದಾನದಲ್ಲಿ ವಾಣಿಜ್ಯ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆಯ ಜೊತೆಗೆ ಜಿಲ್ಲೆಯ ಉದ್ಯಮ, ಕೈಗಾರಿಕೆಗಳು, ಪ್ರಮುಖ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮಳಿಗೆಗಳನ್ನು ಸ್ಥಾಪಿಸಬೇಕು. ಪಿಲಿಕುಳಕ್ಕೆ ಆಗಮಿಸುವ ಜನರಿಗೆ ವಿಜ್ಞಾನ ಕೇಂದ್ರದ ಉಪಕರಣಗಳು, ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡಲು ವಿದ್ಯಾರ್ಥಿ ಸ್ವಯಂಸೇವಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಸಲಹೆ ನೀಡಿದರು.

ಮೇಯರ್ ಹರಿನಾಥ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕೊಂಕಣಿ ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಬ್ಯಾರಿ ಅಕಾಡಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನ್ೀ, ದ.ಕ.ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News