ನೋಟುಗಳ ಅಮಾನ್ಯದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿ: ದಿನೇಶ್ ಗುಂಡೂರಾವ್
ಮಂಗಳೂರು, ನ. 15: ಕೇಂದ್ರ ಸರಕಾರ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವುದರಿಂದ ದೇಶಾದ್ಯಂತ ಅರಾಜಕತೆ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ನವೆಂಬರ್ 19ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ‘ಇಂದಿರಾ ಗಾಂಧಿ ಜನ್ಮಶತಾಬ್ಧಿ ಕಾರ್ಯಕ್ರಮ’ದ ಸಿದ್ಧತೆಯ ಪರಿಶೀಲನೆ ನಡೆಸಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನೋಟುಗಳ ಅಮಾನ್ಯ ನಿರ್ಧಾರದಿಂದಾಗಿ ಕಳೆದ ಐದು ದಿನಗಳಿಂದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಎಟಿಎಂ ಮತ್ತು ಬ್ಯಾಂಕುಗಳ ಎದುರು ತಮ್ಮ ಹಣಕ್ಕಾಗಿಯೇ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉದ್ಭವವಾಗಿದೆ. 2,000 ನೋಟು ಇದ್ದರೂ ಚಿಲ್ಲರೆಗಾಗಿ ಪರದಾಡಬೇಕಾಗಿದೆ. ಆಸ್ಪತ್ರೆ, ಮಳಿಗೆಗಳಲ್ಲಿ ಹಣ ಸ್ವೀಕರಿಸುತ್ತಿಲ್ಲ. ಕೆಲವರು ತಮ್ಮ ಜೀವವನ್ನೂ ಕಳೆದುಕೊಂಡಿದ್ದಾರೆ. ಪ್ರಧಾನಿಯವರ ಈ ನಿರ್ಧಾರ ಜನರಿಗೆ ಅನುಕೂಲಕರವಾಗಿಲ್ಲ. ವ್ಯಾಪಾರ, ವಹಿವಾಟುಗಳಿಗೆ ಪೆಟ್ಟು ಬಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಜನಸಾಮಾನ್ಯರಿಗಾದ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದಲ್ಲದೆ, ಒಟ್ಟಾರೆ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮೋದಿಯವರನ್ನು ಬಿಟ್ಟರೆ ಯಾರೂ ಲೆಕ್ಕಕ್ಕಿಲ್ಲದ ಪರಿಸ್ಥಿತಿ ಉದ್ಬವವಾಗಿದೆ. ವಿದೇಶದಲ್ಲಿರುವ ಹಣವನ್ನು ತರುವುದಾಗಿ ಘೋಷಿಸಿದ್ದ ಪ್ರಧಾನಿಯವರು ಆ ಪ್ರಯತ್ನ ಇನ್ನೂ ಮಾಡಿಲ್ಲ ಎಂದು ಗುಂಡೂರಾವ್ ಹೇಳಿದರು.
ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಮತೀಯ ಭಾವನೆಗಳನ್ನು ಕೆರಳಿಸುವ ಕೋಮುವಾದಿ ಸಂಘಟನೆಗಳಿಂದಾಗಿ ಇಂತಹ ಅಹಿತಕರ ಘಟನೆಗಳು ಮರುಕಳುಸುತ್ತಿದೆ. ಸಂಘಪರಿವಾರ ಮತ್ತು ಬಿಜೆಪಿ ದ್ವೇಷದ ರಾಜಕಾರಣವನ್ನು ಮಾಡುತ್ತಿದೆ. ಸಂಘಪರಿವಾರವು ಜನರ ಭಾವನೆಯನ್ನು ಕೆರಳಿಸಿ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಮಾಡುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಇದು ಹೆಚ್ಚಾಗುತ್ತಿದೆ. ಆದ್ದರಿಂದ ಕೆಲವು ಅಹಿತಕರ ಘಟನೆಗಳು ಸಂಭವಿಸುತ್ತವೆ. ಬಿಜೆಪಿ ಸಾಧನೆ ಏನೂ ಇಲ್ಲ. ಆದ್ದರಿಂದ ಅದು ಜನರ ಭಾವನಾತ್ಮಕ ವಿಷಯಗಳಲ್ಲಿ ಕೈಹಾಕುತ್ತಿದೆ. ಕೋಮು ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಅವರು ಏನು ಮಾತನಾಡಿದರೂ ಅದು ದೇಶಪ್ರೇಮ. ವಿರೋಧ ಮಾಡಿದರೆ ದೇಶದ್ರೋಹದ ಆರೋಪ ಮಾಡುತ್ತಾರೆ ಎಂದು ಗಂಡೂರಾವ್ ಹೇಳಿದರು.
ಇಂದಿರಾ ಗಾಂಧಿ ಜನ್ಮಶತಾಬ್ಧಿ ಯಶಸ್ವಿಗೆ ಕರೆ
ನವೆಂಬರ್ 19ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ‘ಇಂದಿರಾ ಗಾಂಧಿ ಜನ್ಮಶತಾಬ್ಧಿ ಕಾರ್ಯಕ್ರಮ’ವನ್ನು ಯಶಸ್ವಿಗೊಳಿಸುವಂತೆ ದಿನೇಶ್ ಗುಂಡೂರಾವ್ ಕರೆ ನೀಡಿದರು.
ರಾಜ್ಯ ಮಟ್ಟದ ಈ ಬೃಹತ್ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಲಿದ್ದು, ಕಾಂಗ್ರೆಸ್, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದರು.
ಸಚಿವ ಅಶ್ಲೀಲ ಚಿತ್ರ ವೀಕ್ಷಣೆ: ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ
ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಅಶ್ಲೀಲ ಚಿತ್ರ ವೀಕ್ಷಿಸಿರುವುದು ಸಾಬೀತಾದರೆ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮೊಬೈಲ್ ವಾಟ್ಸ್‌ಆ್ಯಪ್‌ಗೆ ಬಂದ ಮೆಸೇಜ್‌ನ್ನು ಓಪನ್ ಮಾಡಿದ್ದಾರೆ. ಅದನ್ನು ಉದ್ದೇಶಪೂರ್ವಕವಾಗಿ ಓಪನ್ ಮಾಡಿಲ್ಲ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಅವರು ವೀಕ್ಷಿಸಿದ್ದಾರೆನ್ನಲಾದ ಬಗ್ಗೆ ವೀಡಿಯೊವನ್ನು ತರಿಸಿ ಪರಿಶೀಲಿಸಲಾಗುತ್ತಿದೆ. ತಪ್ಪೆಸಗಿರುವುದು ಸಾಬೀತಾದರೆ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾಂಗ್ರೆಸ್‌ನ ಶಾಲೆಟ್‌ಪಿಂಟೊ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಅಬ್ದುಲ್ಲತೀಫ್ ಕಂದಕ್, ವಿನಯ್‌ರಾಜ್, ಕವಿತಾ ಸನಿಲ್, ಮುಡಾದ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಟಿ.ಕೆ.ಸುಧೀರ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು