ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆದಿತ್ಯ ಬಿರ್ಲಾ ಗುಂಪಿನಿಂದ 25ಕೋ.ರೂ.ಲಂಚ ಪಡೆದಿದ್ದರು: ಕೇಜ್ರಿವಾಲ್ ಆರೋಪ
ಹೊಸದಿಲ್ಲಿ,ನ.15: ತನ್ನ ನೋಟು ನಿಷೇಧ ಕ್ರಮ ಬಡವರ ಪಾಲಿನ ‘ಖಡಕ್ ಚಾಯ್ ’ ಆಗಿದೆ ಮತ್ತು ಇದು ಶ್ರೀಮಂತರಿಗೆ ಒಗ್ಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸುತ್ತಿರಬಹುದು, ಆದರೆ ಇದು ಶ್ರೀಸಾಮಾನ್ಯನ ಪಾಲಿಗೆ ವಿಷಕ್ಕಿಂತ ಹೆಚ್ಚಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದಿಲ್ಲಿ ಹೇಳಿದರು.
ದಿಲ್ಲಿ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು,ಮೋದಿಯವರು ತನ್ನ ಕಾರ್ಪೊರೇಟ್ ಸ್ನೇಹಿತರನ್ನು ರಕ್ಷಿಸುತ್ತಿದ್ದಾರೆ ಮತ್ತು ಬಡವರನ್ನು ಶೋಷಿಸುತ್ತಿದ್ದಾರೆ. ಅವರು ತನ್ನ ನಿರ್ಧಾರ ಕಪ್ಪುಹಣದ ವಿರುದ್ಧ ಎಂದು ಹೇಳಿಕೊಳ್ಳುತ್ತಿದ್ದಾರೆ, ಆದರೆ ಅದು ಸಾಮಾನ್ಯಜನರ ವಿರುದ್ಧ ದಾಳಿಯಾಗಿದೆ. ಮೋದಿಯವರ ಕಾರ್ಪೊರೇಟ್ ಸ್ನೇಹಿತರು ಅವರಿಗೆ ಹಣ ಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಅವರ ನಿವಾಸಗಳ ಮೇಲೆ ಯಾವುದೇ ಆದಾಯ ತೆರಿಗೆ ದಾಳಿಗಳು ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಆದಿತ್ಯ ಬಿರ್ಲಾ ಸಮೂಹದ ಕಂಪನಿಯಿಂದ 25 ಕೋ.ರೂ.ಲಂಚ ಸ್ವೀಕರಿಸಿದ್ದರು ಎಂದೂ ಆರೋಪಿಸಿದ ಕೇಜ್ರಿವಾಲ್, 2013,ಅ.15ರಂದು ಆದಿತ್ಯ ಬಿರ್ಲಾ ಸಮೂಹದ ಹಿರಿಯ ಅಧಿಕಾರಿ ಶುಭೇಂದು ಅಮಿತಾಬ್ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಅವರ ಬ್ಲಾಕ್‌ಬೆರಿ ಫೋನ್,ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಕೂಲಂಕಶ ವಾಗಿ ತಪಾಸಣೆಗೊಳಪಡಿಸಿದ್ದರು. 2012,ನ.16ರಂದು ಗುಜರಾತ್ ಮುಖ್ಯಮಂತ್ರಿಗಳಿಗೆ 25 ಕೋ.ರೂ.ಗಳನ್ನು ಪಾವತಿಸಲಾಗಿದೆ ಎಂಬ ಟಿಪ್ಪಣಿ ಆಗ ಪತ್ತೆಯಾಗಿತ್ತು. ಆದರೆ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಪ್ರತಿಪಾದಿಸಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೋರ್ವರ ಹೆಸರು ಕಪ್ಪುಹಣ ವಹಿವಾಟಿನಲ್ಲಿ ಕೇಳಿಬಂದಿದೆ ಎಂದು ಕೇಜ್ರಿ ಬೆಟ್ಟು ಮಾಡಿದರು.