ಪೊಲೀಸರಿಗೆ ಮಾಹಿತಿದಾರರಾಗಿ: ಶಾಂತಿ ಸಭೆಯಲ್ಲಿ ಸಚಿವ ಖಾದರ್ ಮನವಿ
ಮಂಗಳೂರು, ನ. 16: ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗಲೂ ಜಾತಿ, ಧರ್ಮವನ್ನು ಪರಿಗಣಿಸದೆ ಅಪರಾಧಿಯ ಪತ್ತೆಗಾಗಿ ಪೊಲೀಸರಿಗೆ ಮಾಹಿತಿದಾರರಾಗಿ ಸಹಕರಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇತ್ತೀಚೆಗೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಚೂರಿ ಇರಿದು ಸಾಮಾಜಿಕ ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ ಧರ್ಮ ಅಥವಾ ಜಾತಿಯ ಆಧಾರದಲ್ಲಿ ರಕ್ಷಿಸಲ್ಪಡಬಾರದು. ಆತ ಅಪರಾಧಿಯಾಗಿದ್ದು, ಕಾನೂನು ಕ್ರಮಕ್ಕೆ ಒಳಪಡಲೇಬೇಕು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಪಿಯ ಬಗ್ಗೆ ಕನಿಕರ, ಸಹಾನುಭೂತಿ ವ್ಯಕ್ತಪಡಿಸದೆ, ಆತನ ಬಗ್ಗೆ ಮಾಹಿತಿ ಸಿಕ್ಕದಲ್ಲಿ ಪೊಲೀಸರಿಗೆ ತಿಳಿಸಿ ಸಹಕರಿಸುವಂತೆ ಖಾದರ್ ಹೇಳಿದರು.
ಸಭೆಯಲ್ಲಿ ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, ಜಿಲ್ಲಾಧಿಕಾರಿ ಡಾ.ಜಗದೀಶ್, ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ, ಅಪರ ಜಿಲ್ಲಾಧಿಕಾರಿ ಕುಮಾರ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ, ಸಂತೋಷ್ ಕುಮಾರ್ ಬೊಳಿಯಾರ್, ಈಶ್ವರ್ ಉಳ್ಳಾಲ, ಮುಹಮ್ಮದ್ ಮುಕ್ಕಚ್ಚೇರಿ, ಕುಂಞಿ ಮೋನು, ಸತೀಶ್ ಕುಂಪಲ ಮತ್ತಿತರ ಉಳ್ಳಾಲ ಮತ್ತು ಕೊಣಾಜೆಯ ಪ್ರಮುಖರು ಉಪಸ್ಥಿತರಿದ್ದರು.