×
Ad

ಹಣ ಬದಲಾವಣೆಗೆ ತೆರಳುವವರಿಗೆ ಉಚಿತ ಸೇವೆ ನೀಡುವ ರಿಕ್ಷಾ ಚಾಲಕ ಸಾದಿಕ್

Update: 2016-11-15 22:50 IST

ಪುತ್ತೂರು, ನ.15: ಎಲ್ಲೆಡೆ 500 ಮತ್ತು 1000 ರೂ. ನೋಟಿನ ಬದಲಾವಣೆಗಾಗಿ ಜನರು ಪರದಾಡುತ್ತಿದ್ದು, ದಿನಗಟ್ಟಲೆ ಬ್ಯಾಂಕ್‌ನ ಮುಂದೆ ಕ್ಯೂ ನಿಂತು ಬಸವಳಿಯುತ್ತಿದ್ದಾರೆ. ಇದನ್ನು ಮನಗಂಡ ರಿಕ್ಷಾ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ನೋಟು ಬದಲಾವಣೆ ಮಾಡುವ ಗ್ರಾಹಕರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ರಿಕ್ಷಾ ಚಾಲಕ ಸಾಧಿಕ್ ಮೋದಿ ಕನಸಿಗೆ ತನ್ನ ಕೈಲಾದ ಅಳಿಲ ಸೇವೆಯನ್ನು ನೀಡುತ್ತಾ ಬೆಂಬಲ ನೀಡುತ್ತಿದ್ದಾರೆ.

ನೈತಾಡಿ, ಪಂಜಳ ಮತ್ತು ಮುಂಡೂರು ಪ್ರದೇಶದ ಗ್ರಾಹಕರಿಗೆ ಸಾಧಿಕ್ ಬ್ಯಾಂಕ್‌ಗೆ ಹೋಗಲು ತನ್ನ ರಿಕ್ಷಾದಲ್ಲಿ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ‘ಹಣ ಬದಲಾಯಿಸಲು ಬ್ಯಾಂಕ್‌ಗೆ ಹೋಗುವ ಎಲ್ಲಾ ಗ್ರಾಹಕರಿಗೆ ಉಚಿತ ಪ್ರಯಾಣ, ನೈತಾಡಿ, ಪಂಜಳ ಮುಂಡೂರು ಎಂಬ ಬ್ಯಾನರ್ ರಿಕ್ಷಾದ ಮುಂಭಾಗದಲ್ಲಿ ಅಳವಡಿಸಿಕೊಂಡಿರುವ ಸಾಧಿಕ್ ಬ್ಯಾನರ್‌ನಲ್ಲಿ ಮೋದಿಯ ಭಾವಚಿತ್ರ ಮತ್ತು ತನ್ನ ಮೊಬೈಲ್ ನಂಬರನ್ನು ಹಾಕಿದ್ದಾರೆ. ಸಾಧಿಕ್‌ನ ಸೇವೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

ನಾನೋರ್ವ ಮೋದಿ ಅಭಿಮಾನಿ: ಸಾಧಿಕ್

ನಾನು ಮೋದಿಯ ಅಭಿಮಾನಿ. ಕಳೆದ 6 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ. ಮೋದಿ ಅವರು ಮಾಡಿರುವ ಈ ಒಳ್ಳೆಯ ಕೆಲಸಕ್ಕೆ ನಾನು ಬೆಂಬಲ ನೀಡುವ ಸಲುವಾಗಿ ಇದೀಗ ಈ ಸೇವೆಯನ್ನು ಮಾಡುತ್ತಿದ್ದೇನೆ. ಅವರ ದೊಡ್ಡ ಕೆಲಸಕ್ಕೆ ನನ್ನ ಸಣ್ಣ ಸಹಕಾರ ನನ್ನದು. ಇಂದಿನಿಂದ 3 ದಿನಗಳ ಕಾಲ ಈ ಸೇವೆಯನ್ನು ನೀಡಲಿದ್ದೇನೆ. ಇಂದು ನನ್ನ ಆಟೋದಲ್ಲಿ ಹಲವಾರು ಮಂದಿ ಬ್ಯಾಂಕ್‌ಗೆ ಬಂದು ಹಣವನ್ನು ಬದಲಾಯಿಸಿಕೊಂಡು ಹೋಗಿದ್ದಾರೆ.

ನನ್ನ ಅಟೋ ಗ್ಯಾಸ್‌ನಲ್ಲಿ ಓಡಾಟ ನಡೆಸುತ್ತಿರುವ ಕಾರಣ ನನಗೆ ದಿನವೊಂದಕ್ಕೆ ಸುಮಾರು 300 ರೂಪಾಯಿಯ ಗ್ಯಾಸ್ ಮುಗಿಯುತ್ತದೆ. ಮೋದಿ ಸರಕಾರ ಬಂದ ಬಳಿಕ ಗ್ಯಾಸ್‌ನ ಬೆಲೆಯೂ ಕಡಿಮೆಯಾಗಿರುವ ಕಾರಣ ಇದರಿಂದ ನನಗೆ ಹೆಚ್ಚು ಖರ್ಚು ಆಗುತ್ತಿಲ್ಲ. ನಾನಂತೂ 2 ಸಾವಿರದ ನೋಟು ಹಿಡಿದಿಲ್ಲ. ಆದರೆ ಮೋದಿಯ ಈ ತೀರ್ಮಾನದ ಬಳಿಕ 10 ಮತ್ತು 20 ರೂಪಾಯಿಯ ಹೊಸ ನೋಟುಗಳು ಗ್ರಾಹಕರಿಗೆ ಬ್ಯಾಂಕ್‌ನಿಂದ ಸಿಗುತ್ತಿದೆ. ಈ ಸಣ್ಣ ಹೊಸ ನೋಟು ನಮಗೂ ಸಿಗುವುದರಿಂದ ಒಳ್ಳೆಯದಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News