×
Ad

ತೋಟಗಾರಿಕಾ ಇಲಾಖೆ ಕಚೇರಿಗೆ ಬಂದ ನಾಗರಾಜ

Update: 2016-11-15 23:37 IST

ಬಂಟ್ವಾಳ, ನ.15: ಬಿ.ಸಿ.ರೋಡಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಮಂಗಳವಾರ ದಿಢೀರ್ ನಾಗರ ಹಾವೊಂದು ಕಾಣಿಸಿಕೊಂಡು ಇಲ್ಲಿನ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ. ಕೆಲ ಹೊತ್ತು ತೋಟಗಾರಿಕಾ ಇಲಾಖೆಯ ಕಚೇರಿಯೊಳಗೆ ಸುತ್ತಾಡಿ, ಕಡತಗಳಲ್ಲಿ ಹೊರಳಾಡಿ ಸಿಬ್ಬಂದಿಯ ಬೆವರಿಳಿಸಿದೆ!. 

ಮುಂಬಾಗಿಲ ಮೂಲಕವೇ ಕಚೇರಿಯ ಒಳಪ್ರವೇಶಿಸಿದ ನಾಗರ ಹಾವು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಆಚಾರ್ಯರು ಕುಳಿತುಕೊಳ್ಳುವ ಚೇಯರ್ ಅಡಿಭಾಗದಲ್ಲಿ ಸುತ್ತಾಡಿದೆ.

ನಾಗರ ಹಾವನ್ನು ಕಂಡು ಬೆಚ್ಚಿ ಬಿದ್ದ ಸಿಬ್ಬಂದಿ ಹೊರ ಓಡಿ ಬಂದು ಉರಗ ತಜ್ಞ ಸ್ನೇಕ್ ಕಿರಣ್‌ರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಸ್ಥಳಕ್ಕೆ ಬಂದ ಅವರು ಕ್ಷಣಾರ್ಧದಲ್ಲಿ ಹಾವನ್ನು ಸೆರೆ ಹಿಡಿದು ಚಾಕಲೇಟ್ ಡಬ್ಬದಲ್ಲಿ ಬಂಧಿಯಾಗಿಸಿದರು. ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಪಡೆದು ಹಾವನ್ನು ವಗ್ಗದ ಕೊಡ್ಯಮಲೆ ಅರಣ್ಯಕ್ಕೆ ಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News