×
Ad

‘ಚಿಲ್ಲರೆ’ ಸಮಸ್ಯೆ: ಹೆರಿಗೆ ಬಳಿಕ ಡಿಸ್‌ಜಾರ್ಜ್‌ಗೆ ನಿರಾಕರಿಸಿದ ಆಸ್ಪತ್ರೆ

Update: 2016-11-16 17:09 IST

ಮಂಗಳೂರು, ನ.16: ‘ಚಿಲ್ಲರೆ’ ಸಮಸ್ಯೆಯನ್ನು ಮುಂದಿಟ್ಟುಕೊಂಡ ನಗರದ ಖಾಸಗಿ ಆಸ್ಪತ್ರೆಯೊಂದು ಹೆರಿಗೆ ಬಳಿಕ ತಾಯಿ,ಮಗುವನ್ನು ಡಿಸ್‌ಜಾರ್ಜ್‌ಗೆ ಅವಕಾಶ ನಿರಾಕರಿಸಿದ ವಿದ್ಯಮಾನ ಬುಧವಾರ ನಡೆದಿದೆ.

ಕಸಬ ಬೆಂಗರೆಯ ಮನ್ಸೂರ್ ಎಂಬವರ ಪತ್ನಿ ಅಸ್ಮತ್ 2ನೆ ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದ ಅವರನ್ನು ಬುಧವಾರ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಮಾಡಬೇಕಾಗಿತ್ತು. ಅದರಂತೆ ಆಸ್ಪತ್ರೆಯ ಬಿಲ್‌ಮೊತ್ತ 40 ಸಾವಿರ ರೂ.ವನ್ನು ಪಾವತಿಸಲು 500, 1,000ರ ನೋಟನ್ನು ನೀಡಿದಾಗ ಆಸ್ಪತ್ರೆಯವರು ಅದನ್ನು ಪಡೆಯಲು ಹಿಂದೇಟು ಹಾಕಿದ್ದಾರೆ.

‘ನಮ್ಮಲ್ಲಿ ಹೊಸ ನೋಟುಗಳಿಲ್ಲ. 100ರ ಕೆಲವು ನೋಟುಗಳಿವೆ. ಉಳಿದಂತೆ 500, 1,000ರ ನೋಟುಗಳನ್ನು ಸ್ವೀಕರಿಸಬೇಕು’ ಎಂದು ಮನ್ಸೂರ್ ಮನವಿ ಮಾಡಿದರೂ ಕೂಡ ಆಸ್ಪತ್ರೆಯವರು ಅದಕ್ಕೆ ಒಪ್ಪಲಿಲ್ಲ. ‘ನಮಗೆ ಹಳೆಯ ನೋಟುಗಳು ಬೇಡ. ಹೊಸ ನೋಟುಗಳನ್ನೇ ತನ್ನಿ. ಇಲ್ಲದಿದ್ದರೆ ಪೊಲೀಸ್ ಕಂಪ್ಲೆಂಟ್ ಮಾಡುತ್ತೇವೆ. ಹೆರಿಗೆಗೆ ಸಂಬಂಧಿಸಿದ ದಾಖಲೆಪತ್ರವನ್ನು ನೀಡುವುದಿಲ್ಲ’ ಎಂದು ಆಸ್ಪತ್ರೆಯವರು ಬೆದರಿಸಿದ್ದಾರೆ ಎನ್ನಲಾಗಿದೆ.

ಹೆರಿಗೆಯ ಬಳಿಕ ತವರು ಮನೆ ಸೇರುವ ತವಕದಲ್ಲಿರುವ ತಾಯಿಗೆ ಈ ಸಮಸ್ಯೆಯಿಂದ ಆತಂಕವಾಗಿದೆ. ಈ ಮಧ್ಯೆ ಮಗುವಿನ ತಂದೆ ಮತ್ತು ಸಂಬಂಧಿಕರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲು ಕಚೇರಿಯಿಂದ ಕಚೇರಿಗೆ ಅಲೆಯತೊಡಗಿದ್ದಾರೆ.

ಕೇಂದ್ರ ಸರಕಾರವು 500 ಮತ್ತು 1,000 ರೂ. ನೋಟನ್ನು ಅಮಾನ್ಯಗೊಳಿಸಿದುದರ ದುಷ್ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಸಮಸ್ಯೆ ತಾರಕಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News