ಬಜರಂಗಿಗಳಗಳ ಜೊತೆ ಮನೆಗೆ ನುಗ್ಗಿ ಸಾಕು ಕರು ಎಳೆದೊಯ್ದ ಮೂಡಬಿದ್ರೆ ಪೋಲಿಸರು !

Update: 2016-11-16 13:02 GMT

ಮೂಡುಬಿದಿರೆ, ನ.16: ತನ್ನ ಮನೆಯ ಆವರಣದಲ್ಲಿ ಕಟ್ಟಿ ಹಾಕಿದ್ದ ಸಾಕು ಕರುವನ್ನು ಕಳ್ಳತನ ಮಾಡಿದ ಕರು ಎಂದು ಭಾವಿಸಿ ಮೂಡುಬಿದಿರೆ ಪೊಲೀಸರು ಬಜರಂಗದಳದ ಕಾರ್ಯಕರ್ತರೊಂದಿಗೆ ಮಧ್ಯರಾತ್ರಿ ವೇಳೆ ತನ್ನ ಮನೆಗೆ ನುಗ್ಗಿ ಬೆದರಿಸಿ, ಮನೆ ಆವರಣದಲ್ಲಿದ್ದ ಸಾಕು ಕರುವನ್ನು ಕೊಂಡೊಯ್ದಿದ್ದಾರೆ ಎಂದು ಬೆಳುವಾಯಿಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿರುವ ಮುಹಮ್ಮದ್ ಶಾಕೀರ್ ಆರೋಪಿಸಿದ್ದಾರೆ.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಶಾಕೀರ್ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ನಾನು ಮನೆಯಲ್ಲಿ 65 ವರ್ಷ ಪ್ರಾಯದ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದೇನೆ. ಬೆಳುವಾಯಿಯಲ್ಲಿ ಮಾಂಸಹಾರಿ ಹೊಟೇಲ್ ಉದ್ಯಮ ನಡೆಸುತ್ತಿದ್ದು ಹೊಟೇಲ್‌ನಲ್ಲಿ ಉಳಿದಿರುವ ಗಂಜಿ ಹಾಳಾಗಬಾರದೆಂಬ ಉದ್ದೇಶದಿಂದ ಎಂಟು ತಿಂಗಳ ಹಿಂದೆ ಬೆಳುವಾಯಿಯ ವ್ಯಕ್ತಿಯೋರ್ವರಿಂದ ಕರುವನ್ನು ಖರೀದಿಸಿದ್ದೆ. ರವಿವಾರ ಮಧ್ಯರಾತ್ರಿ ಮೂಡುಬಿದಿರೆ ಪೊಲೀಸರು ಬಜರಂಗದಳ ಕಾರ್ಯಕರ್ತರಾದ ಶ್ರೀನಾಥ್, ಭಾಸ್ಕರ್ ಆಚಾರ್ಯ, ರುಚೇತನ್ ಜೈನ್, ಜಗ್ಗ, ಪ್ರಸಾದ್ ಹಾಗೂ ಇತರರ ಸಹಿತ 10 ಮಂದಿಯ ಜೊತೆ ನನ್ನ ಮನೆಗೆ ಬಂದಿದ್ದರು. ಬಜರಂಗದಳ ಕಾರ್ಯಕರ್ತರು ಮನೆ ಆವರಣದೊಳಗಿದ್ದರೆ ಪೊಲೀಸರು ಮನೆಯೊಳಗೆ ನುಗ್ಗಿ ದನದ ಮಾಂಸಕ್ಕಾಗಿ ಮನೆಯನ್ನು ಜಾಲಾಡಿಸಿ ಭಯ ಹುಟ್ಟಿಸಿದ್ದಾರೆ. ಏನು ಸಿಗದಿದ್ದಾಗ ಮನೆ ಆವರಣದಲ್ಲಿದ್ದ ನನ್ನ ಸಾಕು ಕರುವನ್ನು ಕಳವು ಮಾಡಿದ ಕರು ಎಂಬಂತೆ ಅನುಮಾನಗೊಂಡು ಕೊಂಡೊಯ್ದಿದ್ದಾರೆ ಎಂದರು.

ನನ್ನ ಮೇಲೆ ಯಾವುದೇ ಗೋಕಳ್ಳತನ ಅಥವಾ ಗೋಮಾಂಸ ಮಾರಾಟದ ಆರೋಪವಿಲ್ಲದಿದ್ದರೂ ಬಜರಂಗದಳ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪೊಲೀಸರು ಮಧ್ಯರಾತ್ರಿ ಮನೆಗೆ ನುಗ್ಗಿ ಮನೆ ಮಂದಿಗೆ ಭಯಹುಟ್ಟಿಸಿ ನಮ್ಮನ್ನು ಕಳ್ಳರಂತೆ ಬಿಂಬಿಸಿದ್ದಾರೆ. ಪೊಲೀಸರ ವರ್ತನೆಯಿಂದ 65 ವರ್ಷ ಪ್ರಾಯದ ನನ್ನ ತಾಯಿ ಹೆದರಿದ್ದು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಆರೋಪಿಸಿದರು. ನನ್ನ ಹೊಟೇಲ್‌ನಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದೇನೆಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಲಾಗಿದೆ. ಅಂತಹ ಕೆಟ್ಟ ಕೆಲಸ ನಾನು ಮಾಡಿಲ್ಲ. ಹೊಟೇಲ್ ಉದ್ಯಮವನ್ನು ನಿಲ್ಲಿಸಲು ಬಜರಂಗದಳ ಕಾರ್ಯಕರ್ತರು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೊಟೇಲ್‌ನಲ್ಲಿ ಸಿಸಿ ಕೆಮರಾ ಅಳವಡಿಸಿದರಿಂದ ನನ್ನ ಮನೆಗೆ ಬಂದು ತೊಂದರೆ ಕೊಡಲಾಗಿದೆ. ಪ್ರಕರಣದ ಬಗ್ಗೆ ನಾನು ಪೊಲೀಸ್ ಕಮಿಷನರ್‌ಗೆ ದೂರು ನೀಡಿರುವುದಾಗಿ ಮುಹಮ್ಮದ್ ಶಾಕೀರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಮೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News