ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸೈನ್‌ಶಿಯಾ-2016’ ಉದ್ಘಾಟನೆ

Update: 2016-11-16 12:13 GMT

ಪುತ್ತೂರು, ನ.16: ಎಲ್ಲವನ್ನು ಬಗೆದು ಒಳಹೊಕ್ಕು ಆ ವಸ್ತುವಿನ ಹಿಂದಿನ ಮನೋಭಾವವನ್ನು ಅರಿಯುವ ಛಾತಿಯುಳ್ಳವನು ಮಾತ್ರ ನಿಜವಾದ ವಿಜ್ಞಾನಿಯಾಗಬಲ್ಲ. ನಾವು ವಿಜ್ಞಾನ ಎನ್ನುವುದರ ನಿಜವಾದ ಅರ್ಥವನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಸೈನ್ಸ್ ಎಂದರೆ ಮೆಡಿಕಲ್, ಇಂಜಿನಿಯರಿಂಗ್ ಅಥವಾ ಪ್ರಯೋಗಾಲಯಗಳಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಜ್ಞಾನ-ವಿಜ್ಞಾನ ಮೇಳ ಸೈನ್‌ಶಿಯಾ-2016ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಮೂಲ ವಿಜ್ಞಾನದ ಕಡೆಗೆ ಗಮನ ಹರಿಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ಎಂದು ಕರೆ ನೀಡಿದರು.

ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಮಾತನಾಡಿ, ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಸಾಮಾಜಿಕ ಬದ್ಧತೆಯ ಮತ್ತು ವೈಜ್ಞಾನಿಕ ತಿಳುವಳಿಕೆಯನ್ನು ನೀಡುವ ಉದ್ದೇಶದಿಂದ ನಡೆಸುತ್ತಿರುವ ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಮಾರಂದ ಅಧ್ಯಕ್ಷತೆಯನ್ನು ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಕಾರದ ವಿಶ್ರಾಂತ ಕಾರ್ಯದರ್ಶಿ ವಿ.ವಿ.ಭಟ್, ಇಸ್ರೊ ಸಂಸ್ಥೆಯ ವಿಶ್ರಾಂತ ವಿಜ್ಞಾನಿ ಪಿ.ಜೆ.ಭಟ್, ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ್ ಭಟ್, ನಿರ್ದೇಶಕರಾದ ಮಲ್ಲಿಕಾ ಪ್ರಸಾದ್, ಸುಬ್ರಹ್ಮಣ್ಯ ಟಿ.ಎಸ್., ರವಿಕೃಷ್ಣ, ವಿಶ್ವಾಸ್ ಶೆಣೈ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.

ರಾಜ್ಯಾದ್ಯಂತ 74 ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 618 ವಿದ್ಯಾರ್ಥಿಗಳು ಮತ್ತು 91 ಉಪನ್ಯಾಸಕರು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಪ್ರೊ.ವಿವೇಕ್ ರಂಜನ್ ಭಂಡಾರಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಚೇತನ್ ಪಿ.ಡಿ. ವಂದಿಸಿದರು. ಉಪನ್ಯಾಸಕಿಯರಾದ ಪ್ರೊ.ಸಂಗೀತಾ ಬಿ.ಎಲ್. ಮತ್ತು ಪ್ರೊ. ನಂದಿನಿ ಎನ್. ರಾವ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News