ನ.20 : ‘ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ’ ಪುಸ್ತಕ ಬಿಡುಗಡೆ

Update: 2016-11-16 12:29 GMT

ಪುತ್ತೂರು, ನ.16: ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರ ಹೊಸ ಕೃತಿ ಹಲಸಿನ ಅಪೂರ್ವವಾದ ಆಯ್ದ ಮಾಹಿತಿಗಳ ಸಂಕಲನ ’ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ’ ಪುಸ್ತಕ ನ.20ರಂದು ಸಂಜೆ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಬೆಂಗಳೂರಿನ ಹಿರಿಯ ತೋಟಗಾರಿಕಾ ತಜ್ಞ ಡಾ.ಎಸ್.ವಿ.ಹಿತ್ತಲಮನಿಯವರು ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ. ವಿವೇಕಾನಂದ ಶಾಲೆಯ ಅಧ್ಯಕ್ಷ ವೆಂಕಟೇಶ್ವರ ಅಮೈಯವರು ಹಲಸಿನ ಸಂದೇಶವನ್ನು ಹೊತ್ತ ಕಾರ್ಡನ್ನು ಬಿಡುಗಡೆಗೊಳಿಸಲಿದ್ದಾರೆ. ಹಲಸು ಆಂದೋಲನ ಮತ್ತು ಪುಸ್ತಕ ಕುರಿತು ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಪರಿಚಯ ಮಾಡಲಿದ್ದಾರೆ. ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸಬಾಧ್ಯಕ್ಷತೆ ವಹಿಸಲಿದ್ದಾರೆ.

ಪುಸ್ತಕವನ್ನು ಪ್ರಕಾಶಿಸಿದ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿದೆ. ಕೃಷಿಕರೇ ನಡೆಸುವ ಅನನ್ಯ ಕೃಷಿ ಮಾಸಿಕ ಅಡಿಕೆ ಪತ್ರಿಕೆ ಕಳೆದ ಹತ್ತು ವರುಷಗಳಲ್ಲಿ ಹಲಸಿನ ಬಗ್ಗೆ ಸಾಕಷ್ಟು ಮಾಹಿತಿ ಪ್ರಕಟಿಸಿದೆ. ವಿಶ್ವದ ಮೂಲೆಮೂಲೆಗಳಿಂದ ಧನಾತ್ಮಕ ಮಾಹಿತಿಗಳನ್ನು ಸಂಪಾದಿಸಿ ಬೆಳಕಿಗೊಡ್ಡಿದೆ. ವೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸಿದೆ. ಹೊಸ ಹೊಸ ತಳಿಗಳನ್ನು ಮತ್ತು ಅದರ ಗುಣಗಳನ್ನು ಕೃಷಿಕರ ಮುಂದಿಟ್ಟಿದೆ. ಹಲಸು ಬಳಕೆಯನ್ನು ಒಂದು ಆಂದೋಲನವನ್ನಾಗಿ ಕೈಗೆತ್ತಿಕೊಂಡಿದೆ.

ಈ ಆಂದೋಲನ ಹುಟ್ಟುಹಾಕಿದವರು ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ. ಇವರು ದೇಶ, ವಿದೇಶಗಳ ಹಲಸು ಪ್ರಿಯರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ಕಲೆಹಾಕಿದ್ದಾರೆ. ಅಡಿಕೆ ಪತ್ರಿಕೆಯೂ ಸೇರಿದಂತೆ ನಾಡಿನ ವಿವಿಧ ಮಾಧ್ಯಮಗಳಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೇಶದ ಪ್ರತಿಷ್ಠಿತ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News