ನೋಟಿನ ಸಮಸ್ಯೆ: ಚಿಕಿತ್ಸೆಗೆ ಹಣವಿಲ್ಲದೆ ವೃದ್ಧ ಮೃತ್ಯು

Update: 2016-11-16 12:43 GMT

ಪಡುಬಿದ್ರೆ, ನ.16: ವೃದ್ದಾಪ್ಯ ವೇತನ ಅಂಚೆ ಕಚೇರಿಗೆ ಬಂದಿದ್ದರೂ ಚಿಲ್ಲರೆಯಿಲ್ಲವೆಂದು ಹಣ ನೀಡದೆ ಇರುವುದರಿಂದ ಅನಾರೋಗ್ಯ ಪೀಡಿತರೊಬ್ಬರು ಚಿಕಿತ್ಸೆಗೂ ಹಣವಿಲ್ಲದೆ ಮೃತಪಟ್ಟ ಘಟನೆ ಬುಧವಾರ ಪಲಿಮಾರಿನಲ್ಲಿ ನಡೆದಿದೆ.

ಮೃತರನ್ನು ಪಲಿಮಾರಿನ ರಾಜೀವ್ ನಗರದ ನಿವಾಸಿ ಮಹಾಬಲ ಪೂಜಾರಿ ಎಂದು ಗುರುತಿಸಲಾಗಿದೆ.

ಮಧುಮೇಹದಿಂದ ಬಳಲುತಿದ್ದ ಮಹಾಬಲ ಪೂಜಾರಿಯವರು ವೃದ್ಧಾಪ್ಯ ಪಿಂಚಣಿ ಹಣಕ್ಕಾಗಿ ಪ್ರತಿದಿನ ಅಂಚೆ ಕಚೇರಿಗೆ ತೆರಳಿ ವಿಚಾರಿಸುತಿದ್ದರು. ಆದರೆ ಪಿಂಚಣಿ ಹಣ ಬಂದರೂ ನಮ್ಮಲ್ಲಿ 500 ರೂ. ಕೊಡಲು ಚಿಲ್ಲರೆ ಸಮಸ್ಯೆ ಇರುವುದಾಗಿ ಅಂಚೆ ಸಿಬ್ಬಂದಿ ಹೇಳುತಿದ್ದರು. ನಿನ್ನೆ ಕೂಡಾ ಅಂಚೆ ಕಚೇರಿಗೆ ತೆರಳಿ ನನಗೆ ಔಷಧಿಗೆ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದರು. ಆದರೆ ಚಿಲ್ಲರೆ ಸಮಸ್ಯೆ ಇರುವುದರಿಂದ ನಮಗೆ ಕೊಡಲು ಸಾಧ್ಯವಿಲ್ಲ ಎಂದು ಅಂಚೆ ಸಿಬ್ಬಂದಿ ಹೇಳಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನನಗೆ ಆಸ್ಪತ್ರೆಗೆ ಹೋಗಬೇಕಾಗಿದ್ದು, ಹಣದ ಅವಶ್ಯಕತೆ ಇದೆ. ಪಿಂಚಣಿ ಹಣವನ್ನು ಚಿಲ್ಲರೆ ಇಲ್ಲದೆ ಇರುವುದರಿಂದ ಪಡೆಯಲು ಸಾಧ್ಯವಾಗುತಿಲ್ಲ ಎಂದು ಸ್ಥಳೀಯರಲ್ಲಿ ಹೇಳಿಕೊಂಡಿದ್ದರು. ಈ ವಿಷಯವನ್ನು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದರು. ಅದರಂತೆ 108ನ್ನು ತರಿಸಿ ಉಡುಪಿಯ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದೆವು. ಅಷ್ಟರಲ್ಲೇ ಅವರು ತನ್ನ ಮನೆಯಲ್ಲಿ ನಿಧನರಾದರು ಎಂದು ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಪಲಿಮಾರು ಹೇಳಿದರು.

ವೃದ್ಯಾಪ್ಯ ವೇತನವನ್ನೇ ನಂಬಿ ಜೀವನ ನಡೆಸುತ್ತಿರುವ ಬಡವರನ್ನು ಅಂಚೆ ಕಚೇರಿಯಲ್ಲಿ ಚಿಲ್ಲರೆ ಸಮಸ್ಯೆ ಇದೆ ಎಂದು ಹೇಳಿ ಅವರನ್ನು ಅಲೆದಾಡಿಸುವುದು ಸರಿಯಲ್ಲ. ಈಗಾಗಲೇ ವೃದ್ದಾಪ್ಯ ವೇತನ ಬಿಡುಗಡೆಯಾಗಿದ್ದರೂ ಹಣ ನೀಡಲು ಚಿಲ್ಲರೆ ಸಮಸ್ಯೆ ಎಂಬ ನೆಪ ಒಡ್ಡುವುದು ಸರಿಯಲ್ಲ. ಕೂಡಲೇ ಅಂಚೆ ಕಚೇರಿಯಲ್ಲಿ ವೃದ್ದಾಪ್ಯ ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ದಿನೇಶ್ ಪಲಿಮಾರು ಆಗ್ರಹಿಸಿದ್ದಾರೆ.

ಮೃತರು ತನ್ನ ಪತ್ನಿಯೊಂದಿಗೆ ಜೀವನ ನಡೆಸುತಿದ್ದರು. ಇವರು ಅನಾರೋಗ್ಯ ಪೀಡಿತರಾಗಿದ್ದು, ಇಬ್ಬರೂ ವೃದ್ದಾಪ್ಯ ವೇತನವನ್ನು ನಂಬಿ ಜೀವನ ಸಾಗಿಸುತಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಪಲಿಮಾರು, ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ, ಸದಸ್ಯ ಅಬ್ದುಲ್ಲಾ ಮೃತರ ಅಂತಿಮ ವಿಧಿವಿಧಾನಕ್ಕೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News