×
Ad

ಬೃಹತ್ ಉದ್ಯಮಿಗಳ 7016 ಕೋಟಿ ರೂ. ಸಾಲ ಮನ್ನಾ!

Update: 2016-11-16 19:08 IST

ಹೊಸದಿಲ್ಲಿ, ನ.16: ಬಾಕಿ ಸಾಲವನ್ನು ವಸೂಲಿ ಮಾಡುವ ಯತ್ನ ಕೈಬಿಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ದೇಶಪೂರ್ವಕ ಸುಸ್ತಿದಾರರು ಪಾವತಿಸಬೇಕಿದ್ದ 7,016 ಕೋಟಿ ರೂ. ಮೊತ್ತದ ಸಾಲವನ್ನು ಮನ್ನಾ ಮಾಡಿದ್ದು ಇದರಲ್ಲಿ ವಿಜಯ ಮಲ್ಯರಿಗೆ ಸೇರಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನಿಂದ ಬರಬೇಕಾಗಿರುವ ಸಾಲವೂ ಸೇರಿದೆ.

ದೇಶದ ಅಗ್ರ 100 ಮಂದಿ ಉದ್ದೇಶಪೂರ್ವಕ ಸುಸ್ತಿದಾರರಲ್ಲಿ 63 ಸುಸ್ತಿದಾರರಿಂದ ಬರಬೇಕಿರುವ 7,016 ಕೋಟಿ ರೂ.ಮೊತ್ತದ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. 31 ಖಾತೆಗಳ ಸಾಲವನ್ನು ಆಂಶಿಕವಾಗಿ ಮನ್ನಾ ಮಾಡಲಾಗಿದ್ದರೆ, 6 ಖಾತೆಗಳನ್ನು ಅನುತ್ಪಾದಕ ಆಸ್ತಿ (ನಿರ್ವಹಣೆ ರಹಿತ ಆಸ್ತಿ) ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಡೈಲಿ ನ್ಯೂಸ್ ಆ್ಯಂಡ್ ಅನಾಲಿಸಿಸ್(ಡಿಎನ್‌ಎ) ವರದಿ ಮಾಡಿದೆ.

2016ರ ಜೂನ್ 30ರಂದು ಎಸ್‌ಬಿಐ 48,000 ಕೋಟಿ ರೂ. ಮೊತ್ತವನ್ನು ವಸೂಲಿಯಾಗದ ಸಾಲ ಎಂದು ಮನ್ನಾ ಮಾಡಿತ್ತು. ಉದ್ದೇಶಪೂರ್ವಕ ಸುಸ್ತಿದಾರರಿಂದ ಬರಬೇಕಾಗಿರುವ ಸಾಲವನ್ನು ಮನ್ನಾ ಮಾಡಿ, ಈ ಖಾತೆಗಳನ್ನು - ವಸೂಲಿ ಮಾಡಬೇಕಿರುವ ಸಾಲದ ಖಾತೆ ವಿಭಾಗ(ಎಯುಸಿಎ) ದಲ್ಲಿ ವಿಶೇಷವಾಗಿ ಆರಂಭಿಸಲಾಗಿರುವ ‘ನಂಜಿನ ಸಾಲ’ದ ಲೆಕ್ಕದಲ್ಲಿ ಸೇರಿಸಲಾಗಿದೆ. ವಸೂಲಿ ಮಾಡಬೇಕಿರುವ ಖಾತೆಯ ವಿಭಾಗದಲ್ಲಿ ಸೇರಿಸುವುದರಿಂದ ಆಗುವ ಅನುಕೂಲವೆಂದರೆ, ಪ್ರತೀ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ ಬ್ಯಾಂಕಿನ ಒಟ್ಟಾರೆ ಅನುತ್ಪಾದಕ ಆಸ್ತಿಯ ಮೊತ್ತ ಮತ್ತು ಇದಕ್ಕೆ ಸೇರ್ಪಡೆಯಾಗುವ ನಿವ್ವಳ ಮೊತ್ತವನ್ನು ಎಯುಸಿಎಗೆ ವರ್ಗಾವಣೆಗೊಳ್ಳುವ ಮೊತ್ತದಿಂದ ಕಡಿತಗೊಳಿಸಬಹುದಾಗಿದೆ.

ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ಈ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು 1,201 ಕೋಟಿ ರೂ. ಮೊತ್ತದಷ್ಟು ಸಾಲ ಪಾವತಿಗೆ ಬಾಕಿಯಿದೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಹಾಗೂ ಇತರ 62 ಸಂಸ್ಥೆಗಳ ಹೆಸರನ್ನು ಬ್ಯಾಂಕಿನ ಬ್ಯಾಲೆನ್ಸ್‌ಷೀಟ್‌ನಲ್ಲಿ ನಮೂದಿಸಲಾಗುವುದಿಲ್ಲ. ಕೆಎಸ್ ಆಯಿಲ್ (596 ಕೋಟಿ ರೂ) , ಸೂರ್ಯ ಫಾರ್ಮಸ್ಯೂಟಿಕಲ್ಸ್ (526 ಕೋಟಿ ರೂ), ಜಿಇಟಿ ಪವರ್( 400 ಕೋಟಿ ರೂ) ಮತ್ತು ಸಾಯ್ ಇನ್‌ಫೋ ಸಿಸ್ಟಮ್ಸ್ (376 ಕೋಟಿ ರೂ) ಈ ಪಟ್ಟಿಯಲ್ಲಿರುವ ಪ್ರಮುಖ ಸಂಸ್ಥೆಗಳು .
  
ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆ 17 ಬ್ಯಾಂಕ್‌ಗಳಿಗೆ ಒಟ್ಟು 6,963 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡಿದ್ದು ಇದರಲ್ಲಿ ಎಸ್‌ಬಿಐ ಪಾಲು 1,201 ಕೋಟಿ ರೂ. ಈಚೆಗೆ ಮಲ್ಯ ಒಡೆತನದ , ಗೋವಾದಲ್ಲಿರುವ ಐಕಿಂಗ್‌ಫಿಷರ್ ವಿಲ್ಲ’ವನ್ನು ಹರಾಜಿಗೆ ಇಟ್ಟಾಗ ಇದಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಒಂದೊಮ್ಮೆ ‘ಕಲಶ್’ ಮತ್ತು ‘ಡಬಲ್ ಶೇರ್‌‘ ಬ್ರಾಂಡ್‌ನಲ್ಲಿ ಸಾಸಿವೆ ಎಣ್ಣೆಯನ್ನು ಉತ್ಪಾದಿಸುತ್ತಿದ್ದ ದೇಶದ ಪ್ರಮುಖ ಸಂಸ್ಥೆಯಾಗಿದ್ದ ಕೆಎಸ್ ಆಯಿಲ್ ಸಾಲ ಮನ್ನಾ ಮಾಡಲಾದ 20 ಪ್ರಮುಖ ಸಂಸ್ಥೆಗಳಲ್ಲಿ ಸೇರಿದೆ. ಇಂಡೋನೇಶಿಯಾ ಮತ್ತು ಮಲೇಶ್ಯಾದಲ್ಲಿ ಎಸ್ಟೇಟ್‌ಗಳಲ್ಲಿ ಹಣ ಹೂಡಿದ್ದ ಈ ಕಂಪೆನಿ ನಿರೀಕ್ಷಿತ ಆದಾಯ ಪಡೆಯಲು ಆಗದ ಕಾರಣ ಸುಸ್ತಿದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಸೂರ್ಯ ಫಾರ್ಮಾಸ್ಯುಟಿಕಲ್ ಸಂಸ್ಥೆ ಕೂಡಾ ಚಿಲ್ಲರೆ ಮಾರುಕಟ್ಟೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡು ಸುಸ್ತಿದಾರರ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದೇ ರೀತಿ ಜಿಇಟಿ ಪವರ್ ಲಿಮಿಟೆಡ್ ಸಂಸ್ಥೆ ಅಸಮರ್ಪಕ ನಿರ್ವಹಣೆ ಮತ್ತು ಕೆಲವು ಯೋಜನೆಗಳ ಆರಂಭದಲ್ಲಿ ಆದ ವಿಳಂಬದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
    ಸರಕಾರೀ ಕ್ಷೇತ್ರದ 29 ಬ್ಯಾಂಕ್‌ಗಳು 1.14 ಲಕ್ಷ ಕೋಟಿ ರೂ. ಮೊತ್ತದ ವಸೂಲಿಯಾಗದ ಸಾಲವನ್ನು 2013ರಿಂದ 2015ರ ಅವಧಿಯಲ್ಲಿ ಮನ್ನಾ ಮಾಡಿವೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ವರದಿ ಮಾಡಿತ್ತು. ಬ್ಯಾಂಕ್‌ಗಳ ಈ ಕ್ರಮ ಬೃಹತ್ ವಂಚನೆ ಎಂದು ಹೇಳಿದ ಸುಪ್ರೀಂಕೋರ್ಟ್, ಅತ್ಯಂತ ಹೆಚ್ಚು ಮೊತ್ತದ ಸುಸ್ತಿದಾರ ಹೆಸರನ್ನು ತನಗೆ ತಿಳಿಸುವಂತೆ ಆರ್‌ಬಿಐಗೆ ನಿರ್ದೇಶನ ನೀಡಿತ್ತು .ಈ ಹಿನ್ನೆಲೆಯಲ್ಲಿ ಎನ್‌ಪಿಎ (ಅನುತ್ಪಾದಕ ಆಸ್ತಿಯ) ಬಗ್ಗೆ ಪರಿಶೀಲನೆ ನಡೆಸಲು ಸಂಸದೀಯ ಸಲಹಾ ಸಮಿತಿಯನ್ನು ರಚಿಸಲಾಗಿತ್ತು.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News