ಎನ್‌ಎಂಪಿಟಿಯ 8ನೆ ಬರ್ತ್‌ನ್ನು ಖಾಸಗಿಗೆ ವಹಿಸದಂತೆ ಕೆಸಿಸಿಐ ಆಗ್ರಹ

Update: 2016-11-16 15:17 GMT

ಮಂಗಳೂರು, ನ. 16: ನವ ಮಂಗಳೂರು ಬಂದರಿನ 8ನೇ ಬರ್ತ್‌ನ್ನು ಖಾಸಗಿಯವರಿಗೆ ನೀಡುವುದನ್ನು ವಿರೋಧಿಸಿ ಈ ಕುರಿತು ಕೇಂದ್ರ ಭೂ ಮತ್ತು ಜಲ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿ ಪ್ರಸ್ತಾಪವನ್ನು ಕೈಬಿಡುವಂತೆ ಆಗ್ರಹಿಸಿದೆ ಎಂದು ಕೆನರಾ ಚೇಂಬರ್‌ನ ಅಧ್ಯಕ್ಷ ಜೀವನ್ ಸಾಲ್ದಾನ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಟೈನರ್ ಟರ್ಮಿನಲ್ ಅಭಿವೃದ್ಧಿಪಡಿಸುವ ನೆಪದಲ್ಲಿ ಬರ್ತ್ ನಂ.8ನ್ನು ಖಾಸಗಿಯವರಿಗೆ ನೀಡುವ ಎನ್‌ಎಂಪಿಟಿ ಹಾಗೂ ಟಿಎಎಂಪಿ ಪ್ರಸ್ತಾಪವನ್ನು ಕೈಬಿಡಬೇಕು. ಬರ್ತ್ ನಂ. 8 ನವ ಮಂಗಳೂರು ಬಂದರಿನಲ್ಲಿ ಅತ್ಯಂತ ಹೆಚ್ಚು ವಹಿವಾಟು ನಡೆಯುವ ಬರ್ತ್ ಆಗಿದ್ದು, ಖಾಸಗಿಯವರಿಗೆ ನೀಡುವ ಕ್ರಮ ಸರಿಯಲ್ಲ ಎಂದರು.

ಇದು 14 ಮೀಟರ್ ಆಳ ಮತ್ತು 260 ಮೀಟರ್ ಅಗಲ ಹೊಂದಿದ್ದು, ಎರಡು ಸರಕು ಹಡಗುಗಳನ್ನು ಏಕಕಾಲದಲ್ಲಿ ಲಂಗರು ಹಾಕಲು ಅವಕಾಶವಿದೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಶುಷ್ಕ ಸರಕು ವಹಿವಾಟು ನಡೆಯುತ್ತದೆ. ಇದನ್ನು ಪಿಪಿಪಿ(ಪಬ್ಲಿಕ್ ಪ್ರೈವೆಟ್ ಪಾರ್ಟಿಸ್‌ಪೇಶನ್) ಆಪರೇಟರ್‌ಗೆ ನೀಡದರೆ ಸ್ಥಳೀಯರು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದಲ್ಲದೆ, ಬಂದರಿನ 8ನೇ ಬರ್ತ್ ಪಡೆಯಲು ಅದಾನಿ ಗ್ರೂಪ್ ಸೇರಿದಂತೆ ಪ್ರಮುಖ ನಾಲ್ಕು ಕಂಪನಿಗಳು ಮುಂದೆ ಬಂದಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆನರಾ ಚೇಂಬರ್‌ನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಕಲ್ಬಾವಿ, ಜೊತೆ ಕಾರ್ಯದರ್ಶಿ ಪಿ.ಎ. ಅಬ್ದುಲ್ ಹಮೀದ್, ವತೀಕಾ ಪೈ, ಎಂ. ಗಣೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News