ಕನ್ಯಾನ: ಕೊಲೆಯತ್ನ ಪ್ರಕರಣದ ಆರೋಪಿಗಳ ಬಂಧನ

Update: 2016-11-16 16:33 GMT

ಬಂಟ್ವಾಳ, ನ. 16: ತಾಲೂಕಿನ ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಅಬೂಬಕರ್ ಎಂಬವರ ಕಡಿದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಂದ್ರಹಾಸ ಮತ್ತು ದಿನೇಶ್ ಬಂಧಿತ ಆರೋಪಿಗಳು.

ನ. 13 ರಂದು ಸಂಜೆ 7 ಗಂಟೆ ಸುಮಾರಿಗೆ ಅಬೂಬಕರ್‌ರ ಅಂಗಡಿಗೆ ನುಗ್ಗಿದ ಆರೋಪಿಗಳು ತಲವಾರಿನಿಂದ ಹಲ್ಲೆ ನಡೆಸಿ ಅವರ ಕೊಲೆಗೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ಅಬೂಬಕರ್ ಬೊಬ್ಬೆ ಹೊಡೆದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಈ ಘಟನೆಯ ಬಳಿಕ ಕನ್ಯಾನ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಆರೋಪಿಗಳನ್ನು ಬಂಧಿಸಲು ವಿಟ್ಲ ಎಸ್ಸೈ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು. ಇಂದು ಬೆಳಗಿನ ಜಾವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಇಬ್ಬರು ಆರೋಪಿಗಳು ವಿಟ್ಲ ಠಾಣೆಯಲ್ಲಿ ರೌಡಿ ಶೀಟನ್ನು ಹೊಂದಿದವರಾಗಿದ್ದು ಕನ್ಯಾನ ಪರಿಸರದಲ್ಲಿ ಪದೇ ಪದೇ ಕಾನೂನು ಬಾಹಿರ ಮತ್ತು ಶಾಂತಿಗೆ ಭಂಗವನ್ನುಂಟುಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ನೇತೃತ್ವದಲ್ಲಿ, ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ, ವಿಟ್ಲ ಠಾಣೆ ಎಸ್ಸೈ ಪ್ರಕಾಶ್ ದೇವಾಡಿಗ ಹಾಗೂ ಅವರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News