ನೋಟು ರದ್ದು: ಸಂಕಷ್ಟದಲ್ಲಿ ಸೌದಿ ಉದ್ಯೋಗಿಗಳ ಕುಟುಂಬಗಳು
ಬೆಹ್ರಾಂಪುರ, ನ.17 : ದೇಶದಲ್ಲಿ ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ದಿಢೀರ್ ನಿರ್ಧಾರ ದಿಂದಾಗಿ ಸೌದಿ ಅರೆಬಿಯಾದಲ್ಲಿ ಉದ್ಯೋಗಿಗಳಾಗಿರುವವರ ಕುಟುಂಬಗಳು ಭಾರತದಲ್ಲಿ ಸಂಕಷ್ಟ ಎದುರಿಸುವಂತಾಗಿದೆ.
ರಿಯಾಲ್ ನ ಸಂಪೂರ್ಣ ವಿನಿಮಯ ಮೌಲ್ಯವನ್ನು ಯಾವಾಗ ನೀಡಬಹುದು ಎಂಬ ಬಗ್ಗೆ ಇನ್ನೂ ಹಣ ವರ್ಗಾವಣೆ ಏಜೆನ್ಸಿಗಳಿಗೇ ಖಚಿತತೆ ಇಲ್ಲದ ಕಾರಣದಿಂದ ಈ ಗೊಂದಲ ನಿರ್ಮಾಣವಾಗಿದೆ. ಹೊಸ ನೋಟುಗಳ ಹರಿವು ಇನ್ನೂ ಮಾಮೂಲಿ ಸ್ಥಿತಿಗೆ ಬಾರದಿರುವುದರಿಂದ, ಸೌದಿ ಅರೇಬಿಯಾದ ಹಣವನ್ನೇ ನಂಬಿರುವ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.
ಬೆಹ್ರಾಂಪುರ ನಿವಾಸಿ ಅಬ್ದುಲ್ ಲತೀಫ್ ಎಂಬುವವರಿಗೆ ಜಾಧುಪುರ ವೆಸ್ಟರ್ನ್ ಯೂನಿಯನ್ ರೋಶ್ನಾರಾ ಏಜೆನ್ಸಿಯಿಂದ 100 ರೂಪಾಯಿಯ ಹತ್ತು ನೋಟುಗಳು ಮಾತ್ರ ಸಿಕ್ಕಿವೆ. ಅವರ ಇಬ್ಬರು ಮಕ್ಕಳಾದ ಮುಸ್ಲಿಂ ಶೇಖ್ ಹಾಗೂ ಹಶೀಬುಲ್ ಶೇಕ್ ಸೌದಿ ಆಸ್ಪತ್ರೆಯೊಂದರ ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಗುರುವಾರ ಅವರು 30 ಸಾವಿರ ರೂಪಾಯಿ ಮೌಲ್ಯದ ರಿಯಾಲ್ ಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಕರೆನ್ಸಿ ನೋಟುಗಳ ಲಭ್ಯತೆ ಇಲ್ಲದ್ದರಿಂದ ಕಂತಿನಲ್ಲಿ ಹಣ ಪಾವತಿಸುವುದಾಗಿ ಈ ಸಂಸ್ಥೆ ಇದೀಗ ಹೇಳುತ್ತಿದೆ ಎಂದು ಲತೀಫ್ ವಿವರಿಸಿದ್ದಾರೆ.
ಚಂದ್ಪಾರಾದ ನಸ್ರುಲ್ ಶೇಖ್ ಅವರ ಅಳಿಯ ರಫೀಕ್ ಉಲ್ ಸೌದಿಯಲ್ಲಿ ಖರ್ಜೂರ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 40 ಸಾವಿರ ರೂಪಾಯಿ ಮೌಲ್ಯದ ರಿಯಾಲ್ ಕಳುಹಿಸಲು ನಿರ್ಧರಿಸಿದ್ದಾರೆ. ಅವರ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ತುರ್ತಾಗಿ ಹಣದ ಅವಶ್ಯಕತೆ ಇದ್ದು, ಅವರಿಗೆ ನೀಡಿರುವ ಹೆರಿಗೆ ದಿನಾಂಕಕ್ಕೆ ಇನ್ನು ಐದು ದಿನವಷ್ಟೇ ಬಾಕಿ. ಹಣ ವರ್ಗಾವಣೆ ಏಜೆನ್ಸಿಯನ್ನು ಸಂಪರ್ಕಿಸಿದಾಗ ನಗದು ಕೊರತೆ ಬಗ್ಗೆ ಹೇಳಿದ್ದಾರೆ ಎಂದು ಶೇಖ್ ವಿವರಿಸಿದರು.
ಏಜೆಂಟರು ಕೂಡಾ ಅಸಹಾಯಕರಾಗಿದ್ದು, ಕೆಲ ಗ್ರಾಹಕರು 500 ಹಾಗೂ 1000 ರೂಪಾಯಿ ನೋಟಿನ ಮೂಲಕ 1.85 ಕೋಟಿ ವಾಪಾಸು ಮಾಡಿದ್ದಾರೆ. ಇವುಗಳನ್ನು ಅವರ ಬ್ಯಾಂಕ್ ಖಾತೆಗೆ ಠೇವಣಿ ಮಾಡಲಾಗಿದೆ. ಹಣದ ಲಭ್ಯತೆ ನೋಡಿಕೊಂಡು ವಾಪಾಸು ಮಾಡುವ ಭರವಸೆ ನೀಡಿದ್ದೇವೆ. ದಿನಕ್ಕೆ ಸರಾಸರಿ 20 ಲಕ್ಷ ಮಾತ್ರ ವರ್ಗಾವಣೆಯಾಗುತ್ತಿತ್ತು. ಇದೀಗ ಅದು 50 ಸಾವಿರಕ್ಕೆ ಇಳಿದಿದೆ ಎಂದು ರೋಶನಾರ್ ಪಾಲುದಾರ ಅಬ್ದುಲ್ ಅಝೀಝ್ ಹೇಳುತ್ತಾರೆ.