×
Ad

ನೊಬೆಲ್ ಪ್ರಶಸ್ತಿ ಸ್ವೀಕರಿಸಲು ಪುರುಸೊತ್ತಿಲ್ಲದ ಬಾಬ್ ಡೈಲಾನ್ !

Update: 2016-11-17 10:21 IST

ಕೋಪೆನ್ ಹೇಗನ್, ನ.17 : ಅಮೆರಿಕಾದ ಖ್ಯಾತ ಗಾಯಕ ಗೀತ ರಚನಕಾರ ಬಾಬ್ ಡೈಲಾನ್ ಅವರು ಸಾಹಿತ್ಯ ಕ್ಷೇತ್ರದಲ್ಲಿನ ಅನುಪಮ ಸಾಧನೆಗಾಗಿ ಪಡೆದ 2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಪಡೆಯಲು  ಡಿಸೆಂಬರ್ 10 ರಂದು ಸ್ಟಾಕ್ಹೋಂ ನಲ್ಲಿ ನೊಬೆಲ್ ಪ್ರಶಸ್ತಿ ಸ್ಥಾಪಕ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯ ದಿನದಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ.
ತಮಗೆ ವೈಯಕ್ತಿಕವಾಗಿ ಪ್ರಶಸ್ತಿ ಸ್ವೀಕರಿಸಬೇಕೆಂಬ ಮನಸ್ಸಿದ್ದರೂ ನನ್ನ ಇತರ ಕೆಲಸಗಳ ಒತ್ತಡದಿಂದ ಅದು ದುರದೃಷ್ಟಕರವಾಗಿ ಸಾಧ್ಯವಾಗುತ್ತಿಲ್ಲವೆಂದು ಡೈಲಾನ್ ತಮಗೆ ಹೇಳಿದ್ದಾರೆಂದು ಸ್ವೀಡಿಶ್ ಅಕಾಡಮಿ ಹೇಳಿದೆ.

ಅಮೆರಿಕಾದ ಗಾಯನ ಪದ್ಧತಿಯಲ್ಲಿ ಕಾವ್ಯಾತ್ಮಕ ಅಭಿವ್ಯಕ್ತಿಗಳನ್ನು ತುಂಬಿಸಿದ್ದಕ್ಕಾಗಿ 75 ವರ್ಷದ ಡೈಲಾನ್ ಅವರನ್ನು ಈ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗಾಗಿ ಅಕ್ಟೋಬರ್ 13 ರಂದು ಆಯ್ಕೆ ಮಾಡಲಾಗಿತ್ತು. ಅವರ ಪರವಾಗಿ ಯಾರು ಪ್ರಶಸ್ತಿ ಸ್ವೀಕರಿಸುತ್ತಾರೆಂಬುದರ ಬಗ್ಗೆ ಯಾವುದೂ ಸ್ಪಷ್ಟವಿಲ್ಲವಾದರೂ ಈ ಬಗ್ಗೆ ಶುಕ್ರವಾರ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಬಾಬ್ ಡೈಲಾನ್ ಅವರು ಬರೆದಿರುವ ವೈಯಕ್ತಿಕ ಪತ್ರ ತನಗೆ  ತಲುಪಿದೆ ಹಾಗೂ ತಾನು ಅವರ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಸ್ವೀಡಿಶ್ ಅಕಾಡಮಿ ಹೇಳಿದೆಯಲ್ಲದೆ ಪ್ರಶಸ್ತಿ ಸ್ವೀಕರಿಸಲು ಬಾರದೇ ಇರುವುದು ಅಸಹಜವಾದರೂ, ಅಪವಾದವಲ್ಲ ಎಂದು ಹೇಳಿದೆ. ಆದರೂ ಅವರು ಡಿಸೆಂಬರ್ 10 ರಿಂದ ಆರು ತಿಂಗಳೊಳಗೆ ನೀಡಬೇಕಾಗಿರುವ ನೊಬೆಲ್ ಭಾಷಣವನ್ನು ನಾವು  ಎದುರು ನೋಡುತ್ತಿದ್ದೇವೆ, ಎಂದು ಅಕಾಡಮಿ ಹೇಳಿದೆ.

ತಮಗೆ ಪ್ರಶಸ್ತಿ ಬಂದಾಗ ಮೊದಲು ಏನೂ ಪ್ರತಿಕ್ರಿಯಿಸದೇ ಇದ್ದ ಡೈಲಾನ್ ನಂತರ ಈ ಪ್ರಶಸ್ತಿ ತಮ್ಮನ್ನು ಮೂಕನನ್ನಾಗಿಸಿದೆ ಎಂದಿದ್ದರು. ಪ್ರೆಸಿಡೆನ್ಶಿಯಲ್ ಮೆಡಲ್ ಫಾರ್ ಫ್ರೀಡಂ ಸಹಿತ ಹಲವಾರು ಪ್ರಶಸ್ತಿಗಳನ್ನು ಡೈಲಾನ್ ಈಗಾಗಲೇ ಪಡೆದಿದ್ದಾರೆ.
2004 ರಲ್ಲಿ ಆಸ್ಟ್ರಿಯಾದ ನಾಟಕಕಾರ ಹಾಗೂ ಕಾದಂಬರಿಕಾರ ಎಲ್ಫ್ರೀಡ್ ಜೆಲಿನೆಕ್  ಸೋಶಿಯಲ್ ಫೋಬಿಯಾ ನೆಪವೊಡ್ಡಿ ಪ್ರಶಸ್ತಿ ಸ್ವೀಕರಿಸಲು ಹಾಜರಾಗಿರಲಿಲ್ಲ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News