×
Ad

ಅಣೆಕಟ್ಟು ಪೂರ್ಣಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ: ಕ್ರಿಯಾ ಸಮಿತಿ

Update: 2016-11-17 12:09 IST

ಕಾಸರಗೋಡು, ನ.17 : ಕಾಸರಗೋಡು ನಗರಸಭಾ  ಮತ್ತು ಸುತ್ತಮುತ್ತಲಿನ  ಐದು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ  ಪಯಸ್ವಿನಿ  ಹೊಳೆಯ ಬಾವಿಕ್ಕರೆಯಲ್ಲಿ ಶಾಶ್ವತ ಅಣೆಕಟ್ಟು ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಕ್ರಿಯಾ ಸಮಿತಿ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿದೆ.

ಮೊದಲ ಹಂತವಾಗಿ  ನವೆಂಬರ್ 19ರಂದು ಬೆಳಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ  ಹಾಕಲು ತೀರ್ಮಾನಿಸಿರುವುದಾಗಿ ಕ್ರಿಯಾ ಸಮಿತಿ ಅಧ್ಯಕ್ಷ  ಇ.ಕುಂಞಕಣ್ಣನ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿವರ್ಷ 10 ರಿಂದ 12ಲಕ್ಷ ರೂ. ವೆಚ್ಚ ಮಾಡಿ  ತಾತ್ಕಾಲಿಕ ಅಣೆಕಟ್ಟು ನಿರ್ಮಿಸಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಎರಡು  ದಶಕದ ಹಿಂದೆ ಶಾಶ್ವತ ಅಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ  ಆರಂಭಿಸಿದರೂ ಕಾಂಕ್ರೀಟ್  ಕಂಬಗಳಲ್ಲೇ ಉಳಿದುಕೊಂಡಿದೆ.  ಬಳಿಕದ ವರ್ಷಗಳಲ್ಲಿ ಕೊಟ್ಯಾ೦ತರ ರೂ. ವೆಚ್ಚ ಮಾಡಿ  ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಆದರೆ ಬೇಸಿಗೆ ಕಾಲದಲ್ಲಿ ಒಂದೆರೆಡು ಮಳೆ ಸುರಿದರೆ ಅಣೆಕಟ್ಟು  ಒಡೆದು, ಸಮುದ್ರದ ಉಪ್ಪು ನೀರು ಸೇರ್ಪಡೆಗೊಳ್ಳುತ್ತಿದೆ. ಇದರಿಂದ  ಉಪ್ಪು ನೀರು ಸೇವಿಸಬೇಕಾದ  ದುಸ್ಥಿತಿ ಕಾಸರಗೋಡಿನ ಜನತೆಗೆ ಉಂಟಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ  ಯೋಜನೆ ಮೂಲೆಗುಂಪಾಗಿದ್ದು, ಈ ಬಾರಿ ತಾತ್ಕಾಲಿಕ ತಡೆಗೋಡೆ  ನಿರ್ಮಾಣಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ . ಶಾಶ್ವತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ  ಸಂಚಾಲಕ ಮುನೀರ್, ಅಬ್ದುಲ್ಲ ಆಲೂರು , ಬಾಲಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News