ಗದ್ದಾಫಿಯೊಂದಿಗಿನ ಹಣ ವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡ ಫ್ರಾನ್ಸ್ ಮಾಜಿ ಅಧ್ಯಕ್ಷ
ಪ್ಯಾರಿಸ್, ನ. 17: ಎರಡನೆ ಬಾರಿ ಫ್ರೆಂಚ್ ಅಧ್ಯಕ್ಷರಾಗಲು ಸಿದ್ಧತೆನಡೆಸುತ್ತಿರುವ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೋಝಿಯ ಚುನಾವಣಾ ಫಂಡ್ ವಿವಾದ ತಾರಕಕ್ಕೇರಿದೆ ಎಂದು ವರದಿಯಾಗಿದೆ. ಚುನಾವಣಾ ಪ್ರಚಾರಕ್ಕೆ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕಾಲಸ್ ಲಿಬಿಯದ ಹಿಂದಿನ ಪದಚ್ಯುತ ಆಡಳಿತಗಾರ ದಿವಂಗತ ಮುಅಮ್ಮರ್ ಗದ್ದಾಫಿಯಿಂದ ಹಣ ಪಡೆದು ಕೊಂಡಿದ್ದಾರೆ ಎಂದುಬಲವಾದ ಆರೋಪ ನಿಂತಿದೆ.
2006- 2007ರ ನಡುವೆ ಗದ್ದಾಫಿ ಸರ್ಕೊಝಿಗೆ ಹಣ ನೀಡಿರುವುದಾಗಿ ಪ್ರೆಂಚ್- ಲೆಬನೀಸ್ ಉದ್ಯಮಿ ಝಿಯಾದ್ ತಕಿಯುದ್ದೀನ್ ಪ್ರೆಂಚ್ ಸುದ್ದಿ ಏಜೆನ್ಸಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಾನು ಹಣ ನೀಡಲಿಕ್ಕೆಂದೇ ಮೂರು ಬಾರಿ ಲಿಬಿಯದ ರಾಜಧಾನಿ ಟ್ರಿಪೊಲಿಯಿಂದ ಪ್ಯಾರಿಸ್ ಗೆ ಬಂದಿದ್ದೆ ಎಂದು ಆವರು ಹೇಳಿದ್ದಾರೆ. ಪ್ರತಿಬಾರಿಯೂ ಸೂಟ್‌ಕೇಸ್‌ನಲ್ಲಿ 15-20 ಲಕ್ಷ ಯುರೊಗಳಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ. ಗದ್ದಾಫಿಯ ಸೇನಾ ಇಂಟಲಿಜೆನ್ಸ್ ಮುಖ್ಯಸ್ಥ ಅಬ್ದುಲ್ಲ ಸೆನೂಸಿ ತಕಿಯುದ್ದೀನ್‌ಗೆ ಈ ಹಣವನ್ನು ನೀಡಿದ್ದರು. ಜೈಲಲ್ಲಿರುವ ಗದ್ದಾಫಿಯ ಪುತ್ರ ಸೈಫುಲ್ ಇಸ್ಲಾಮ್ ಸರ್ಕೊಝಿಗೆ ಹಣ ನೀಡಿದ್ದನ್ನು ದೃಢೀಕರಿಸಿದ್ದರು. 2011 ಮಾರ್ಚ್‌ನಲ್ಲಿ ಸರ್ಕೊಝಿ ವಿರುದ್ಧ ಫಂಡ್ ವಿವಾದ ತಲೆಎತ್ತಿಕೊಂಡಿತ್ತು. ಆರೋಪವನ್ನು ನಿರಾಕರಿಸಿದ್ದರೂ ಸರ್ಕೊಝಿ 2012ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು ಎಂದು ವರದಿ ತಿಳಿಸಿದೆ.