ಕನಕದಾಸರ ಕೀರ್ತನೆ ಮೂಲಕ ಜಾತಿ ರಹಿತ ಸಮಾಜದ ಜಾಗೃತಿ: ಸಚಿವ ರೈ
ಮಂಗಳೂರು, ನ.17: ಕನಕದಾಸರು ಕೀರ್ತನೆ ಮೂಲಕವೇ ಜಾತಿ ರಹಿತ ಸಮಾಜದ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ ಪ್ರಸಕ್ತ ಸಮಾಜದಲ್ಲಿ ಶಾಸಕಾಂಗ, ರಾಜ್ಯಾಂಗ ಮಾತ್ರವಲ್ಲದೆ ಪತ್ರಿಕಾರಂಗದಲ್ಲೂ ಜಾತಿ ಸುಳಿದಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.
ನಗರದ ಪುರಭವನದಲ್ಲಿ ಇಂದು ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಯತ್ನವಾಗಬೆಕು. ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡದೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಕುರುಬ ಜನಾಂಗದವರು ಇಲ್ಲವಾಗಿದ್ದರೂ ಉದ್ಯೋಗ ನಿಮಿತ್ತ ಇಲ್ಲಿಗೆ ಬಂದು ಇಲ್ಲಿನ ಜನರ ಜೊತೆ ಹೊಂದಾಣಿಕೆ ಮಾಡಿಕೊಂಡು ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಮೇಯರ್ ಹರಿನಾಥ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮುಹಮ್ಮದ್ ಹನೀಫ್, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗೇರು ನಿಗಮ ಅಧ್ಯಕ್ಷ ಬಿ.ಎಚ್ ಖಾದರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ.ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ, ಡಿಸಿಪಿ ಶಾಂತರಾಜು, ಕರಾವಳಿ ಕುರುಬರ ಸಂಘದ ಅಧ್ಯಕ್ಷ ಡಾ. ಕೆ.ಇ ಪ್ರಕಾಶ್, ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು.