ಕನಕ ಜಯಂತಿ ಏಕದಿನಕ್ಕೆ ಸೀಮಿತಗೊಂಡಿರುವುದು ಸಾಮಾಜಿಕ ದುರಂತ: ಅರ್ತಿಕಜೆ

Update: 2016-11-17 12:00 GMT

ಪುತ್ತೂರು, ನ.17: ದಾಸಶ್ರೇಷ್ಠರಾಗಿರುವ ಕನಕದಾಸರ ಜಯಂತಿಯನ್ನು ವರ್ಷದಲ್ಲಿ ಒಂದು ದಿನ ಆಚರಿಸಿಕೊಂಡು ಉಳಿದ 364 ದಿನಗಳಲ್ಲಿ ಮರೆತು ಬಿಡುತ್ತಿರುವುದು ಸಾಮಾಜಿಕ ದುರಂತವಾಗಿದೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಕನಕನ ಆದರ್ಶಗಳು ಪ್ರತಿದಿನ ಆಚರಣೆಯಾಗಬೇಕು ಎಂದು ವಿಶ್ರಾಂತ ಉಪನ್ಯಾಸಕ, ಅಂಕಣಗಾರ ವಿ.ಬಿ. ಅರ್ತಿಕಜೆ ಹೇಳಿದರು.

ಅವರು ಗುರುವಾರ ಪುತ್ತೂರು ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರಿನ ಪುರವನದಲ್ಲಿ ನಡೆದ ಕನಕದಾಸ ಜಂತಿ ಆಚರಣೆಯನ್ನು ಉದ್ಘಾಟಿಸಿ ಬಳಿಕ ಕನಕ ಸಂಸ್ಮರಣೆ ಮಾಡಿದರು. ಸಂಪದ್ಬರಿತ ಕುಟುಂಬದಲ್ಲಿ ಹುಟ್ಟಿ ಸರ್ವತ್ಯಾಗಿಯಾಗಿ ದಾರ್ಶನಿಕರಾದ ಕನಕದಾಸರು ಬ್ರಾಹ್ಮಣೇತರರು ಎಂಬ ಕಾರಣಕ್ಕೆ ಕಲಿಕೆಯ ಸಂದರ್ಭದಲ್ಲಿ ಮಠದಲ್ಲಿ ಬ್ರಾಹ್ಮಣರಿಂದ ಟೀಕೆ, ತಮಾಷೆಗೆ ಒಳಗಾದರು. ಆದರೂ ತನ್ನ ಅಪೂರ್ವ ಚಿಂತನೆಯಿಂದ ಸಂತ ಶ್ರೇಷ್ಠರು ಎನಿಸಿಕೊಂಡರು ಎಂದ ಅವರು, ಕನಕದಾಸರ ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ, ಹರಿ ಭಕ್ತಿ ಸಾರ, ನಳದಮಯಂತಿ ಚರಿತ್ರೆ ಸೇರಿದಂತೆ ಹಲವಾರು ಆಧ್ಯಾತ್ಮಿಕ ಮತ್ತು ವೈಚಾರಿಕ ಪದ್ಯಗಳು ಜನ ಮಾನಸದಲ್ಲಿ ಹಾಸುಹೊಕ್ಕಾಗಿದೆ ಎಂದರು.

ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ ಕನಕದಾಸರ ಸರಳತೆ, ತ್ಯಾಗ ನಮಗೆಲ್ಲರಿಗೂ ಆದರ್ಶಪ್ರಾಯ ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಅನಂತಶಂಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ನಗರಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪ ತಹಶೀಲ್ದಾರ್ ಶ್ರೀಧರ್ ಸ್ವಾಗತಿಸಿದರು. ತಾಲೂಕು ನಾಡಹಬ್ಬಗಳ ಸಾಂಸ್ಕೃತಿಕ ಉಪಸಮಿತಿ ಸಂಚಾಲಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ವಂದಿಸಿದರು. ಪ್ರೊ. ಬಿ.ಜೆ.ಸುವರ್ಣ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News