ಸುಳ್ಯ: ಕನಕ ಜಯಂತಿ ಆಚರಣೆ

Update: 2016-11-17 13:30 GMT

ಸುಳ್ಯ, ನ.17: ಸುಳ್ಯ ತಾಲೂಕು ನಾಡಹಬ್ಬಗಳ ದಿನಾಚರಣೆ ಸಮಿತಿ ವತಿಯಿಂದ ಕನಕದಾಸ ಜಯಂತಿ ಕಾರ್ಯಕ್ರಮ ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.

ತಹಶೀಲ್ದಾರ್ ಎನ್.ಎಂ.ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಕನಕದಾಸರು ಕೀರ್ತನೆಗಳ ಮೂಲಕ ಜೀವನಾನುಭವವನ್ನು ಉಣಬಡಿಸಿದ್ದು, ಅವರ ಜೀವನಾನುಭವಗಳು ಈಗಲೂ ಪ್ರಸ್ತುತ ಎಂದವರು ಹೇಳಿದರು.

ಉಪತಹಶೀಲ್ದಾರ್ ರಾಮಣ್ಣ ನಾಯ್ಕ ಮಾತನಾಡಿ, ಕನಕದಾಸರ ಕೃಷ್ಣನ ಭಕ್ತರು. ದಂಡನಾಯಕರಾಗಿದ್ದ ಅವರು ಯುದ್ಧದಲ್ಲಿ ಸೋತ ಬಳಿಕ ಹರಿಭಕ್ತರಾದರು ಎಂದರು.

ಸಾಹಿತಿ ನಾರಾಯಣ ನೀರಬಿದಿರೆ ಉಪನ್ಯಾಸ ನೀಡಿದರು. 15ನೆ ಶತಮಾನದಲ್ಲಿಯೇ ಶುದ್ಧ ಕನ್ನಡದಲ್ಲಿ ಸರಳವಾಗಿ ಹರಿಕಥೆಗಳನ್ನು ಜನರಿಗೆ ತಲುಪಿಸಿದವರು ಕನಕದಾಸರು. ಕೀಳು ಜಾತಿಯವ ಎಂಬ ಕಾರಣಕ್ಕೆ ಉಡುಪಿ ದೇವಸ್ಥಾನದೊಳಗೆ ಪ್ರವೇಶ ಸಿಗದಿದ್ದಾಗ ಗೋಡೆ ಹಿಂದೆ ಹೋಗಿ ಪ್ರಾರ್ಥನೆ ಸಲ್ಲಿಸಿದಾಗ ಕೃಷ್ಣನ ಮೂರ್ತಿಯ ಮುಖ ಆ ಕಡೆಗೆ ತಿರುಗಿದೆ. ಅಲ್ಲಿ ಕಿಂಡಿ ನಿರ್ಮಾಣವಾಗಿದೆ. ಇದನ್ನು ಬ್ರಾಹ್ಮಣರೂ ಒಪ್ಪಿಕೊಳ್ಳುತ್ತಾರೆ. ಘಟನೆ ನಡೆದು 600 ವರ್ಷಗಳು ಕಳೆದರೂ ಇನ್ನೂ ಕೃಷ್ಣನ ಮುಖವನ್ನು ಮೊದಲಿದ್ದ ಸ್ಥಿತಿಗೆ ತರಲು ಯಾರಿಂದಲೂ ಆಗಿಲ್ಲ. ಹಾಗಾಗಿ ಕನಕದಾಸರು ಪ್ರಪಂಚದ ಅತೀ ದೊಡ್ಡ ಭಕ್ತ, ಅವರ ಕೀರ್ತನೆಗಳ ಪುಸ್ತಕಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಅದನ್ನು ಎಲ್ಲರೂ ಓದಬೇಕು ಎಂದವರು ಹೇಳಿದರು.

ಉಪ ತಹಶೀಲ್ದಾರ್ ವೆಂಕಪ್ಪ ನಾಯ್ಕಾ, ಬಿಇಒ ಕೆಂಪಲಿಂಗಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಾಲಿಚಂದ್ರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರಿದ್ದರು. ರಾಮಣ್ಣ ನಾಯ್ಕಾ ಸ್ವಾಗತಿಸಿ, ಚಂದ್ರಶೇಖರ ಪೇರಾಲು ವಂದಿಸಿದರು. ನರಿಯಪ್ಪ ಮಠದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News