ನಮ್ಮ ಮೌಲ್ಯಗಳಿಗಾಗಿ ಹೋರಾಡುವೆ : ಪರಾಜಿತ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್
ವಾಶಿಂಗ್ಟನ್, ನ. 17: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಿರಾಶೆಯ ಹೊರತಾಗಿಯೂ, ಹೆಚ್ಚು ವೈವಿಧ್ಯ ಅಮೆರಿಕಕ್ಕಾಗಿ ಹೊಸದಾಗಿ ಹೋರಾಡುವುದಾಗಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಬುಧವಾರ ಹೇಳಿದ್ದಾರೆ.
ಅಮೆರಿಕ ಈಗಲೂ ತಾವು ತಿಳಿದ ಅಮೆರಿಕವಾಗಿ ಉಳಿದಿದೆಯೇ ಎಂಬುದಾಗಿ ಅವರ ವಿಜಯದ ಬಳಿಕ ಹಲವರು ಕೇಳುತ್ತಿದ್ದಾರೆ ಎಂದು ಕಳೆದ ವಾರ ಚುನಾವಣಾ ಸೋಲಿನ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಹಿಲರಿ ಹೇಳಿದರು.
‘‘ಈ ಚುನಾವಣೆಯ ಅವಧಿಯಲ್ಲಿ ಸೃಷ್ಟಿಯಾದ ವಿಭಜನೆ ಆಳವಾಗಿದೆ. ಆದರೆ, ದಯವಿಟ್ಟು ನನ್ನ ಮಾತು ಕೇಳಿ. ಅಮೆರಿಕ ಅಮೆರಿಕವೇ, ನಮ್ಮ ಮಕ್ಕಳು ನಮ್ಮ ಮಕ್ಕಳೇ’’ ಎಂದು ವಿದ್ಯಾರ್ಥಿವೇತನ ವಿಜೇತರನ್ನು ಅಭಿನಂದಿಸುವ ‘ಚಿಲ್ಡ್ರನ್ ಡಿಫೆನ್ಸ್ ಫಂಡ್’ನ ಕಾರ್ಯಕ್ರಮವೊಂದರಲ್ಲಿ ಹೇಳಿದರು.
‘‘ನಮ್ಮ ದೇಶದ ಮೇಲೆ ನಂಬಿಕೆಯಿಡಿ, ನಮ್ಮ ವೌಲ್ಯಗಳಿಗಾಗಿ ಹೋರಾಡಿ, ಯಾವತ್ತೂ ಕೈಚೆಲ್ಲಬೇಡಿ’’ ಎಂದು ಅವರು ಕರೆ ನೀಡಿದರು.
ಕಳೆದ ವಾರ ನಡೆದ ಮತದಾನದಲ್ಲಿ ಹಿಲರಿ ಕ್ಲಿಂಟನ್ ತನ್ನ ರಿಪಬ್ಲಿಕನ್ ಪಕ್ಷದ ಎದುರಾಳಿ ಡೊನಾಲ್ಡ್ ಟ್ರಂಪ್‌ಗಿಂತ ಹೆಚ್ಚು ಜನಪ್ರಿಯ ಮತಗಳನ್ನು ಪಡೆದಿದ್ದಾರೆ. ಆದಾಗ್ಯೂ, ಮಹತ್ವದ ಇಲೆಕ್ಟೋರಲ್ ಕಾಲೇಜ್ ಮತಗಳಲ್ಲಿ ಟ್ರಂಪ್‌ಗಿಂತ ಹಿಂದುಳಿದಿದ್ದಾರೆ.