×
Ad

ರೋಗಿಗಳ ಬಿಡುಗಡೆಗೊಳಿಸದ ಆಸ್ಪತ್ರೆ ವಿರುದ್ಧ ಪ್ರತಿಭಟನೆ

Update: 2016-11-17 21:08 IST

ಮಂಗಳೂರು, ನ. 17: 500 ಮತ್ತು 1000 ಮುಖಬೆಲೆಯ ನೋಟುಗಳ ಅಮಾನ್ಯದಿಂದಾಗಿ ಹೊಸ ನೋಟು ನೀಡದ ರೋಗಿಗಳನ್ನು ಅಕ್ರಮವಾಗಿ ಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿ ಡಿವೈಎಫ್‌ಐ ಕಾರ್ಯಕರ್ತರು ಇಂದು ಕುಲಾಸೊ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದರು.

ಕುಲಾಸೋ ಆಸ್ಪತ್ರೆಯಲ್ಲಿ ಹೊಸ ನೋಟು ನೀಡದ ಕಾರಣ ರೋಗಿಗಳನ್ನು ಡಿಸ್ಚಾರ್ಜ ಮಾಡದೆ ಅಕ್ರಮ ಬಂಧನದಲ್ಲಿಡಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಡಿವೈಎಫ್‌ಐ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು.

ಆಸ್ಪತ್ರೆಯ ಈ ಧೋರಣೆಯಿಂದ ಹದಿನೈದಕ್ಕೂ ಹೆಚ್ಚು ಅಸಹಾಯಕ ರೋಗಿಗಳು ಬವಣೆ ಪಡುತ್ತಿದುದು ಕಂಡುಬಂತು. ವೈದ್ಯರು ಡಿಸ್ಚಾರ್ಜ್ ಮಾಡಲು ಹೇಳಿದ್ದರೂ ಹೊಸನೋಟು ಇಲ್ಲದ ಕಾರಣ ಕಳೆದ ಮೂರು ದಿವಸಗಳಿಂದ ಅವರನ್ನು ಬಿಡುಗಡೆಗೊಳಿಸದೆ ಅನಧಿಕೃತ ಬಂಧನದಲ್ಲಿಡಲಾಗಿತ್ತು. ಈ ಕುರಿತು ಆಸ್ಪತ್ರೆ ಆಡಳಿತ, ಆರೋಗ್ಯಾಧಿಕಾರಿ, ಜಿಲ್ಲಾಡಳಿತದ ಜೊತೆಗೆ ಮಾತುಕತೆ ನಡೆಸಿದರೂ ಆಡಳಿತ ಮಂಡಳಿ ತೀರಾ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಆದರೆ ಪಟ್ಟುಬಿಡದ ಡಿವೈಎಫ್‌ಐ ಕಾರ್ಯಕರ್ತರು ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿ, ಚಿಕಿತ್ಸೆ ಮುಗಿದ ರೋಗಿಗಳನ್ನು ಸ್ವತಃ ಬಿಡುಗಡೆಗೊಳಿಸುವ ಕಾರ್ಯಾಚರಣೆಗಿಳಿದರು. ಡಿವೈಎಫ್‌ಐ ಕಾರ್ಯಕರ್ತರ ಪ್ರತಿರೋಧದಿಂದ ಕೊನೆಗೂ ಆಡಳಿತ ಮಂಡಳಿ ಚೆಕ್ ಮೂಲಕ ಬಿಲ್ ಪಾವತಿಯನ್ನು ಪಡೆಯಲು ಒಪ್ಪಿಕೊಂಡಿತು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಜಿಲ್ಲಾ ಮುಖಂಡರಾದ ಜೀವನ್‌ರಾಜ್ ಕುತ್ತಾರ್, ನಿತಿನ ಕುತ್ತಾರ್, ಸಾದಿಕ್ ಕಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News