ಕುರುಬರು ಕನಕ ಸಿದ್ಧಾಂತವನ್ನು ಅನುಸರಿಸಿ: ಪೇಜಾವರ ಶ್ರೀ
ಉಡುಪಿ, ನ.17: ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿಯ ವತಿಯಿಂದ ಭಕ್ತ ಕನಕದಾಸರ 529ನೆ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಯು ಗುರುವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದು, ಬಳಿಕ ರಥಬೀದಿಯಲ್ಲಿರುವ ಕನಕನ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಬೆಂಗಳೂರಿನಿಂದ ಕಾಗಿನೆಲೆಯ ಮೂಲಕ ಉಡುಪಿಗೆ ಆಗಮಿಸಿದ ರಥ ಯಾತ್ರೆಯನ್ನು ನಗರದ ಜೋಡುಕಟ್ಟೆಯಿಂದ ಅದ್ದೂರಿ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ಜ್ಯೋತಿಯೊಂದಿಗೆ ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀಕೃಷ್ಣಮೂರ್ತಿ ಹಾಗೂ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ್ ಎಚ್.ಎನ್. ರಥಬೀದಿಗೆ ಆಗಮಿಸಿದರು.
ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀಯೋಗೇಶ್ವರಾನಂದ ಸ್ವಾಮೀಜಿ ಕನಕ ಮೂರ್ತಿಗೆ ಪೂಜೆ ಸಲ್ಲಿಸಿದರು. ತದನಂತರ ರಾಜಾಂಗಣದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕನಕ ದಾಸರ ಅನುಯಾಯಿಗಳು ಭಕ್ತಿಯ ದೀಕ್ಷೆಯನ್ನು ತೆಗೆದುಕೊಂಡು ಕನಕನ ಸಿದ್ಧಾಂತವನ್ನು ಅನುಸರಿಸಬೇಕು. ಕನಕನ ಭಕ್ತಿ ಸಿದ್ಧಾಂತ ಎಲ್ಲಡೆ ಹೆಚ್ಚು ಪ್ರಚಾರವಾಗಿದೆ. ಅದು ಕನಕ ಮಾಡಿರುವ ಭಕ್ತಿಯ ಕ್ರಾಂತಿ. ಅದು ಕೇವಲ ಒಂದು ಗುಂಪಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿಯವರಿಗೆ ಅನ್ವಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಶ್ರೀಯೋಗೇಶ್ವರಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀ ಕೃಷ್ಣ ಮೂರ್ತಿ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಸಾಹಿತಿ ಚೋರನಹಳ್ಳಿ ಮಹೇಶ್, ಮೇಟಿ ಮುದಿಯಪ್ಪ, ಎನ್.ಕೆ.ರಾಮಶೇಷನ್, ಜಗದೀಶ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ವಿಶ್ವನಾಥ್ ಎಚ್.ಎನ್. ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮುಂದಿನ ವರ್ಷ ಕನಕ ಮಂದಿರ ಉದ್ಘಾಟನೆ
ಕನಕ ಮಂದಿರ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಮಠದ ವತಿಯಿಂದ 25ಲಕ್ಷ ರೂ. ನೀಡಲಾಗುವುದು. ಮುಂದಿನ ವರ್ಷ ನಮ್ಮ ಪರ್ಯಾಯ ಮುಗಿಯುವುದರೊಳಗೆ ಮುಖ್ಯಮಂತ್ರಿಗಳು ಆಗಮಿಸಿ ಕನಕ ಮಂದಿರವನ್ನು ಉದ್ಘಾಟಿಸಲಿರುವರು ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.
ಮಹಾಬಲಿಪುರದಲ್ಲಿ ಸುಮಾರು 25ಲಕ್ಷ ರೂ. ಅನುದಾನದಲ್ಲಿ ಕಾಮ ಗಾರಿ ಚಾಲನೆ ನೀಡಲಾಗಿದೆ. ಕನಕ ಮಂದಿರದ ಗೋಪುರದ ರಚನೆಯನ್ನು ಶಿಲ್ಪಿ ಭಾಸ್ಕರ್ ಮಾಡುತ್ತಿದ್ದಾರೆ. ಮುಂದಿನ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಮಂದಿರವನ್ನು ಉದ್ಘಾಟಿಸಲಿದ್ದಾರೆ ಎಂದು ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯಾಧ್ಯಕ್ಷ ಓಂ ಶ್ರೀಕೃಷ್ಣಮೂರ್ತಿ ತಿಳಿಸಿದರು.