×
Ad

ನೋಟುಗಳನಿರ್ಬಂಧದ ಹಿಂದೆ ಸಹಕಾರ ಕ್ಷೇತ್ರವನ್ನು ಬಲಹೀನಗೊಳಿಸುವ ಹುನ್ನಾರ

Update: 2016-11-18 15:03 IST

ಮಂಗಳೂರು, ನ.18: ಕೇಂದ್ರ ಸರಕಾರವು 500 ರೂ. ಹಾಗೂ 1000 ರೂ.ಗಳ ನೋಟುಗಳಿಗೆ ನಿರ್ಬಂಧ ಹೇರಿರುವುದರಿಂದ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣಕಾಸಿನ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ನಿರ್ಧಾರದಲ್ಲಿ ಸಹಕಾರಿ ಕ್ಷೇತ್ರವನ್ನು ಬಲಹೀನಗೊಳಿಸುವ ಹುನ್ನಾರ ಅಡಗಿರುವ ಅನುಮಾನವಿದೆ ಎಂದು ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಹೇಳಿದ್ದಾರೆ.

ನಗರದ ನೆಹರೂ ಮೈದಾನದ ಪುಟ್ಬಾಲ್ ಮೈದಾನದಲ್ಲಿ ಇಂದು 63ನೆ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರವುವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರಕಾರವು ಆ ನೋಟುಗಳನ್ನು ಯಾವ ಉದ್ದೇಶದಿಂದ ರದ್ದುಪಡಿಸಿದೆ ಎಂಬ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ಇದರಿಂದಾಗಿ ಸಹಕಾರಿ ಸಂಸ್ಥೆಗಳು ಮಾತ್ರ ಸಂಕಷ್ಟ ಎದುರಿಸುವಂತಾಗಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಅಥವಾ ತೆಗೆಯಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ರಾಜ್ಯದಲ್ಲಿ 10,400 ಕೋಟಿ ರೂ. ಕೃಷಿ ಸಾಲ ಒದಗಿಸಲಾಗಿದೆ. 2,000 ಕೋಟಿ ರೂ. ಈ ಅವಧಿಯಲ್ಲಿ ಜಮಾ ಆಗಬೇಕಾಗಿದೆ. ಆದರೆ ಸಾಲ ಪಡೆದವರಿಗೆ ಜಮಾ ಮಾಡಲು ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೃಷಿ ಸಾಲವನ್ನು ಕ್ಲಪ್ತ ಸಮಯದಲ್ಲಿ ಪಾವತಿಸದೆ, ಸರಕಾರದಿಂದ ಒದಗಿಸಲಾಗುವ ಬಡ್ಡಿ ವಿನಾಯಿತಿಯ ಸೌಲಭ್ಯವನ್ನು ಪಡೆಯಲಾಗುತ್ತಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಶೇ. 25ರಷ್ಟು ಮಂದಿ ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿಲ್ಲದ ಕಾರಣ ರೈತರು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿರುವವರು ಸಂಕಷ್ಟಕ್ಕೀಡಾಗಿದ್ದಾರೆ ಎಂದವರು ವಿಷಾದಿಸಿದರು.

ಸರಕಾರವು ಹಾಲಿನ ಒಕ್ಕೂಟಕ್ಕೆ ನೀಡುತ್ತಿದ್ದ 4 ರೂ.ಗಳ ಪ್ರೋತ್ಸಾಹಧನವನ್ನು 5 ರೂ.ಗಳಿಗೆ ಮುಂದಿನ ತಿಂಗಳಿನಿಂದ ಏರಿಕೆ ಮಾಡಿದೆಯಾದರೂ ಅದನ್ನು ಪಾವತಿಸಲಾಗತ್ತಿಲ್ಲ. 45 ಲಕ್ಷ ಜನ ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಬಂಧ ಸಡಿಲಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಯವರು ಕೇಂದ್ರದ ವಿತ್ತ ಸಚಿವರಿಗೆ ಸುದೀರ್ಘ ಪತ್ರ ಬರೆದಿದ್ದು, ಕೇಂದ್ರದಿಂದ ಪೂರಕ ಪ್ರಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದವರು ಹೇಳಿದರು.

ಸಹಕಾರಿ ಸಂಘಗಳ ರೈತ ಸದಸ್ಯರ ಕೃಷಿ ಸಾಲಗಳ ಮರುಪಾವತಿ ವಾಯ್ದೆಯನ್ನು ಹಣಕಾಸಿನ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುವವರೆಗೆ ಮುಂದುವರಿಸಬೇಕು ಸೇರಿದಂತೆ ಏಳು ಬೇಡಿಕೆಗಳನ್ನು ಒಳಗೊಂಡಂತೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಸಲ್ಲಿಸಿದ ಮನವಿಗಳ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಪೂರಕ ನಿರ್ಧಾರ ಕೈಗೊಳ್ಳುವುದಾಗಿ ಅವರು ಸಚಿವ ಮಹದೇವ ಪ್ರಸಾದ್ ಭರವಸೆ ನೀಡಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಹಕಾರಿ ಧ್ವಜಾರೋಹಣಗೈದರು. ಈ ಸಂದರ್ಭ ಮಾತನಾಡಿದ ಅವರು, ಸಹಕಾರಿ ಚಳವಳಿ, ವ್ಯವಸ್ಥೆ ಸೋತರೆ ಮತ್ತೆ ರೈತರು, ಬಡವರು ಬಡ್ಡಿ ಸಾಹುಕಾರರ ಕಪಿಮುಷ್ಠಿಗೆ ಸಿಲುಕುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೇಡಿಕೆಗೆ ಸ್ಪಂದಿಸದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಡಾ. ರಾಜೇಂದ್ರ ಕುಮಾರ್ ಎಚ್ಚರಿಕೆ
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್, 500 ರೂ. ಹಾಗೂ 1000 ರೂ. ನೋಟುಗಳ ನಿರ್ಬಂಧದಿಂದಾಗಿ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅವಲಂಬಿಸಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸಮಸ್ಯೆ ಪರಿಹಾರವಾಗುವವರೆಗೆ ರಾಜ್ಯ ಸರಕಾರ ಸಾಲಗಳ ಮರುಪಾವತಿ ಅವಧಿಯನ್ನು ಮುಂದೂಡಬೇಕು. ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಸರಕಾರ ಜಾರಿಗೊಳಿಸಿದ್ದ ಪ್ರೊ. ವೈದ್ಯನಾಥನ್ ಸಮಿತಿ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ತಮ್ಮ ಬೇಡಿಕೆಗಳಿಗೆ ಸರಕಾರದಿಂದ ಸ್ಪಂದನ ದೊರಕದಿದ್ದರೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ಅವರು ಈ ಸಂದರ್ಭ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಶೇಖರ ಗೌಡ ವಿ. ಮಾಲಿ ಪಾಟೀಲ ವಹಿಸಿದ್ದರು.
ಈ ಸಂದರ್ಭ ಮಾಜಿ ಸಚಿವರಾದ ಅಮರನಾಥ ಶೆಟ್ಟಿ ಹಾಗೂ ಮೋಟಮ್ಮ ಅವರಿಗೆ ಉತ್ತಮ ಸಹಕಾರ ಸಂಘಗಳಿಗಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News