×
Ad

ಮಾನಸಿಕ ಗುಲಾಮಗಿರಿಯಿಂದ ಹೊರಬಂದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ:ಜಯಂತ್ ಕಾಯ್ಕಿಣಿ

Update: 2016-11-18 18:09 IST

ಮೂಡುಬಿದಿರೆ, (ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣ) ನ.18: ಪೂರ್ವಜರು ಅಳವಡಿಸಿಕೊಂಡು ಬಂದ ಕೆಲವು ಆಚಾರ ವಿಚಾರಗಳನ್ನು ಕೈ ಬಿಟ್ಟು ಸ್ವತಂತ್ರ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಮಾನಸಿಕ ಗುಲಾಮಗಿರಿಯಿಂದ ಹೊರಬಂದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಡಾ. ಜಯಂತ್ ಕಾಯ್ಕಿಣಿ ಕರೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕರ್ನಾಟಕ: ನಾಳೆಗಳ ನಿರ್ಮಾಣ ಪರಿಕಲ್ಪನೆಯಡಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಮೂರುದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿ’ಯನ್ನು (ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ) ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

 ಸಮಾಜದಲ್ಲಿ ಜಾತಿ, ಮತ ಭೇದ ಎಂಬ ದರಿದ್ರಗೆರೆಗಳು ಆವರಿಸಿದೆ. ಸಾವಿರ ಕಂಬಗಳ ಚಪ್ಪರದಿಂದ ಕೂಡಿದ ರೂಪಕ ಎಂಬಂತಹ ಭಾರತದಲ್ಲಿ ಇವು ಸಾಮಾನ್ಯ ಎಂದು ಭಾವಿಸಿ ಸುಮ್ಮನಿರದೆ ಜೀವನದ ‘ನಾಳೆ’ ಎಂಬ ಸುಂದರ ಜಗತ್ತನ್ನು ಕಟ್ಟಿಕೊಳ್ಳಲು ಮುಂದಾಗೇಕು. ‘ನಾಳೆ’ ಎಂಬುದು ಅಲೌಖಿಕವಾದುದು, ಅನಿರೀಕ್ಷಿತವಾದುದು. ಅವುಗಳ ಮೂಲಧಾತು ಅಭಿವ್ಯಕ್ತಿ ಸ್ವಾತಂತ್ರದಲ್ಲಿ ಅಡಗಿದೆ. ಹಾಗಾಗಿ ಪ್ರಜಾಪ್ರಭುತ್ವದ ಜೀವಾಳವಾಗಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಬಳಸಿಕೊಳ್ಳಬೇಕೇ ವಿನ: ಮಾನಸಿಕ ಗುಲಾಮರಾಗಬಾರದು ಎಂದು ಜಯಂತ್ ಕಾಯ್ಕಿಣಿ ಹೇಳಿದರು.

ಇಂದಿನ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಗಳು ಆಧುನಿಕ ಚಿಂತನೆಗಳನ್ನು ಬಿತ್ತದೆ ಸುಳ್ಳುಭ್ರಮೆಯಲ್ಲಿ ತೇಲಾಡುವಂತೆ ಮಾಡುತ್ತದೆ. ಸತ್ಯವೋ, ಸುಳ್ಳೋ ಯಾರೋ ಒಬ್ಬರು ಕಳುಹಿಸಿದ ಸಂದೇಶಗಳನ್ನು ರವಾನಿಸುತ್ತಾ ಕಾಲ ಕಳೆಯುತ್ತಾರೆಯೇ ವಿನ: ಈ ನಿಟ್ಟಿನಲ್ಲಿ ತಾವು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಚಿಂತಿಸುತ್ತಿಲ್ಲ. ರೋಗಿಗಳ ಆರೈಕೆಯ ತಾಣವಾಗಿರುವ ಆಸ್ಪತ್ರೆಗಳಲ್ಲಿ ಇಂದು ಜಾತಿಮತ ಮೀರಿದ ಬದುಕನ್ನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಸಾವಿನಂಚಿನಲ್ಲೂ ಅಲ್ಲಿ ಧನಾತ್ಮಕ ಚಿಂತನೆಗಳು, ಪರೋಪಕಾರ ಮನೋಭಾವ, ಪ್ರೀತಿಯನ್ನು ಸಾರುವ ಕೇಂದ್ರವಾಗುತ್ತದೆ ಎಂದು ಜಯಂತ್ ಕಾಯ್ಕಿಣಿ ತಿಳಿಸಿದರು.

ಬಾಲ್ಯದ ಹೃದಯಶ್ರೀಮಂತಿಕೆ ಇಂದು ಕಣ್ಮರೆಯಾಗುತ್ತಿದೆ. ನಮ್ಮನ್ನೇ ಸುಡುವ ದ್ವೇಷ ಮೇಳೈಸುತ್ತಿದೆ. ವರ್ತಮಾನದ ಭಾವಪ್ರಪಂಚವನ್ನು ಸೃಷ್ಟಿಸುವ ಸಂಸ್ಕೃತಿಯ ಪ್ರತೀಕವಾಗಿರುವ ಈ ನುಡಿಸಿರಿಯು ಜಾತಿ, ಮತ, ಧರ್ಮದ ಭೇದವನ್ನು ಮೀರಿ ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲ್ಪಡುತ್ತಿವೆ. ಕನ್ನಡ ಭಾಷೆಗೆ ಆಭರಣದಂತಿರುವ ಈ ಉತ್ಸವವು ಅಸಮಾನತೆ, ಮೂಢನಂಬಿಕೆಗಳನ್ನು ದೂರಮಾಡಲು ವೇದಿಕೆಯಾಗುತ್ತಿವೆ. ಸಾಕ್ಷಿಪ್ರಜ್ಞೆಯನ್ನು ಬೆಳೆಸುವ, ನೈಜ ಅಧ್ಯಾತ್ಮವನ್ನು ಹೊಂದಿರುವ ಕಲೆ-ವೈಚಾರಿಕತೆಯನ್ನು ಬಿತ್ತುವ ಕೇಂದ್ರಗಳಾಗುತ್ತಿವೆ. ಸಂಸ್ಕ್ಕೃತಿ ಎಂಬುದು ಯಾವತ್ತೂ ವಸ್ತುಪ್ರದರ್ಶನವಾಗಿರದೆ, ಉದ್ಯಾನವನವಾಗಿರಲಿ ಎಂದು ಡಾ. ಜಯಂತ್ ಕಾಯ್ಕಿಣಿ ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಮನುಬಳಿಗಾರ್, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಹಿರಿಯ ಸಾಹಿತಿ ಏರ್ಯಲಕ್ಷ್ಮಿನಾರಾಯಣ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ ಹಾಗು ನುಡಿಸಿರಿಯ 48 ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕಮ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.

2018 ವಿಶ್ವನುಡಿಸಿರಿ ವಿರಾಸತ್

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಆಳ್ವಾಸ್ ನುಡಿಸಿರಿಯ ರುವಾರಿ ಡಾ. ಎಂ. ಮೋಹನ್ ಆಳ್ವ, ನೋಟು ಅಮಾನ್ಯದ ತಳಮಳ, ಆತಂಕದ ಮಧ್ಯೆಯೂ ಈಬಾರಿಯ ನುಡಿಸಿರಿ ಯಶಸ್ವಿಯಾಗಿ ನಡೆಯುವ ಭರವಸೆ ಇದೆ. ಈಗಾಗಲೆ 32, 347 ಮಂದಿ ಹೆಸರು ನೋಂದಾಯಿಸಿ ಪ್ರತಿನಿಧಿಗಳಾಗಿದ್ದಾರೆ. ಅದರಲ್ಲೂ ಒಂದೇ ಗ್ರಾಮದ 758 ಮಂದಿ ಇಲ್ಲಿ ಪ್ರತಿನಿಧಿಗಳಾಗಿ ಹೆಸರು ನೋಂದಾಯಿಸಿರುವುದು ವಿಶೇಷ ಎಂದರಲ್ಲದೆ, ‘2018ರಲ್ಲಿ ನಡೆಯುವ 15ನೆ ವರ್ಷದ ನುಡಿಸಿರಿಯು ‘ವಿಶ್ವನುಡಿಸಿರಿ ವಿರಾಸತ್’ ಆಗಿ ಇಲ್ಲಿ ಸಂಭ್ರಮಿಸಲಿದೆ ಎಂದು ಘೋಷಿಸಿದರು.

►ನಾಡಗೀತೆ, ದೇಶಭಕ್ತಿಗೀತೆ, ರೈತಗೀತೆ ಹಾಡಿದಾಗ ಮೂರು ಬಣ್ಣದ ಮೂರು ಪ್ರತ್ಯೇಕ ಧ್ವಜಗಳನ್ನು ಪ್ರದರ್ಶಿಸಲಾಯಿತು.

►ಕಲಸಿಗೆಯ ಮೇಲಿಟ್ಟ ಭತ್ತದೆ ತೆನೆಗೆ ಹಾಲು ಸುರಿದು ಮತ್ತು ವ್ಯಾಸಪೀಠದಲ್ಲಿದ್ದ ಸಿರಿಗನ್ನಡ ಕೃತಿಯ ಪುಟಗಳನ್ನು ತೆರೆಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಮ್ಮೇಳನ ಉದ್ಘಾಟಿಸಲಾಯಿತು.

►ಸಮ್ಮೇಳನದ ನೆನಪಿಗಾಗಿ ಸಾವಿರ ಕಂಬದ ಬಸದಿ ಮತ್ತು ವೇಣೂರಿನ ಬಾಹುಬಲಿಯ ಚಿತ್ರವನ್ನೊಳಗೊಂಡ ವಿಶೇಷ ಅಂಚೆ ಲಕೋಟೆ ಹಾಗೂ ಡಾ. ಮೋಹನ್ ಆಳ್ವರ ಚಿತ್ರವನ್ನೊಳಗೊಂಡ ಅಂಚೆ ಚೀಟಿಯನ್ನೂ ಅನಾವರಣ ಮಾಡಲಾಯಿತು.

► ಆಳ್ವಾಸ್ ನುಡಿಸಿರಿ 2915ರ ನೆನಪಿನ ಸಂಚಿಕೆ ‘ಕರ್ನಾಟಕ: ಹೊಸತನದ ಹುಡುಕಾಟ’ವನ್ನು ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಬಿಡುಗಡೆಗೊಳಿಸಿದರು.

►ಶಿಸ್ತು ಮತ್ತು ಸಮಯಪ್ರಜ್ಞೆಗೆ ಖ್ಯಾತಿ ಪಡೆದಿರುವ ಆಳ್ವಾಸ್ ನುಡಿಸಿರಿಯಲ್ಲಿ ಈ ಬಾರಿಯೂ ಅದು ಮೇಳೈಸಿತು. ಎಲ್ಲವೂ ನಿಗದಿತ ಸಮಯಕ್ಕೆ ನಡೆದು ಪ್ರಶಂಸೆಗೆ ಪಾತ್ರವಾಯಿತು.

► ನುಡಿಸಿರಿಯು ರತ್ನಾಕರವರ್ಣಿ ವೇದಿಕೆ, ಕೆ.ಪಿ. ಸುಬ್ಬಣ್ಣ ಬಯಲು ರಂಗಮಂದಿರ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆ, ಸಿನಿಸಿರಿ ಕುವೆಂಪು ವೇದಿಕೆ, ಡಾ. ಶಿವರಾಮ ಕಾರಂತ ವೇದಿಕೆ, ಮಿಜಾರು ಅಣ್ಣಪ್ಪವೇದಿಕೆ, ಬೋಲ ಚಿತ್ತರಂಜನ್‌ದಾಸ್ ಶೆಟ್ಟಿ ವೇದಿಕೆ, ಸುಭಾಶ್ಚಂದ್ರ ಪಡಿವಾಳ್ ವೇದಿಕೆ, ಕು.ಶಿ.ಹರಿದಾಸ ಭಟ್ಟ ವೇದಿಕೆ, ಸಿದ್ಧಕಟ್ಟೆ ಚೆನ್ನಪ್ಪಶೆಟ್ಟಿ ವೇದಿಕೆಯನ್ನು ಒಳಗೊಂಡಿತ್ತು.

► ನುಡಿಸಿರಿಯಲ್ಲಿ ಸಿನಿಸಿರಿ, ಕೃಷಿಸಿರಿ, ವಿದ್ಯಾರ್ಥಿ ಸಿರಿಯೊಂದಿಗೆ ಕುಸ್ತಿ ಪಂದ್ಯಾಟಕ್ಕೂ ಒತ್ತು ನೀಡಿರುವುದು ಈ ಬಾರಿಯ ವಿಶೇಷ.

ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿಲ್ಲ: ಡಾ. ಬಿ.ಎಂ. ಹೆಗ್ಡೆ

ಸಂತೋಷ, ನೆಮ್ಮದಿ ಎಂಬುದು ಮನುಷ್ಯನ ಗುರಿ ಅಲ್ಲ. ಅದೊಂದು ಯಾತ್ರೆಯಂತೆ. ನಕಾರಾತ್ಮಕ ಚಿಂತನೆಯಿಂದ ನೆಮ್ಮದಿ ಹಾಳಾಗಲಿದೆಯೇ ವಿನ: ಮಿತವಾಗಿ ತಿಂದರೆ ಅಲ್ಲ. ಹಾಗಾಗಿ ಹೆಚ್ಚು ತಿಂದರೂ ಕಷ್ಟ. ತೀರಾ ಕಡಿಮೆ ತಿಂದರೂ ಕಷ್ಟ. ಈ ನಿಟ್ಟಿನಲ್ಲಿ ಆಹಾರ ಸೇವನೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವ ಅಗತ್ಯವಿದೆ. ಹಾಗಂತ ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿಲ್ಲ ಎಂದು ಡಾ. ಬಿ.ಎಂ. ಹೆಗ್ಡೆ ಹೇಳಿದರು.

ಆಳ್ವಾಸ್ ನುಡಿಸಿರಿಯಲ್ಲಿ ‘ಆರೋಗ್ಯ ಮತ್ತು ಆಹಾರ’ದ ಬಗ್ಗೆ ಅವರಯ ವಿಶೇಷ ಉಪನ್ಯಾಸ ನೀಡಿದರು.

ದೇಹದ ಭಾರ ಕಡಿಮೆಯಾದರೆ ಸಾವು ಸಂಭವಿಸಬಹುದು ಎಂಬ ಆತಂಕ ಬೇಡ. ಹೆಚ್ಚು ಕೆಲಸ ಮಾಡಿ, ಮಿತವಾಗಿ ತಿನ್ನಿ. ಇದರಿಂದ ಮಾನಸಿಕ ಸಮತೋಲಕ ಕಾಪಾಡಿಕೊಳ್ಳಲು ಸಾಧ್ಯವಿದೆ. ಅಪರಾಹ್ನ 2 ಗಂಟೆಯ ಬಳಿಕ ಊಟ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಡಿ. ಇದರಿಂದ ಆರೋಗ್ಯಕ್ಕೆ ಹಾನಿ ಇದೆ ಎಂದು ಡಾ.ಬಿ.ಎಂ. ಹೆಗ್ಡೆ ತಿಳಿಸಿದರು.

‘ನಾಳೆ’ ಎಂಬುದು ವಿಜ್ಞಾನ ಲೋಕದಲ್ಲಿಲ್ಲ. ಹಾಗಾಗಿ ಇಂದಿನ ಬಗ್ಗೆ ಮಾತ್ರ ಯೋಚಿಸೋಣ. ಆಹಾರವನ್ನು ಯಾವತ್ತೂ ಹಾಳುಮಾಡಬೇಡಿ. ಹೆಚ್ಚಾದುದನ್ನು ಎಸೆಯದೆ ಬಡವರ ಬಗ್ಗೆ ಕನಿಕರ ತೋರಿ. ಜಗತ್ತಿನ ಶೇ.ಒಬ್ಬರಷ್ಟು ಈ ಬಗ್ಗೆ ಚಿಂತಿಸಿದರೆ ಅರ್ಧಕ್ಕರ್ಧ ಮಂದಿ ಒಳ್ಳೆಯವರಾದಂತೆಯೇ ಸರಿ ಎಂದ ಡಾ. ಬಿ.ಎಂ. ಹೆಗ್ಡೆ, ಆರೋಗ್ಯದಲ್ಲಿ ಉಡುಗೆ ತೊಡುಗೆ ಕೂಡ ಮಹತ್ತರ ಪಾತ್ರ ವಹಿಸುತ್ತದೆ. ಸೂಟುಬೂಟು ತೊಟ್ಟವರಿಗಿಂತಲೂ ಮುಂಡು (ಲುಂಗಿ) ಉಟ್ಟವರ ಆರೋಗ್ಯದಲ್ಲಿ ವೃದ್ಧಿಯಾಗಿರುವುದು ಸುಳ್ಳಲ್ಲ. ಪೌಷ್ಠಿಕ ಆಹಾರ ನಮ್ಮ ನೆಲದಲ್ಲೇ ಇದೆಯೇ ವಿನ: ಪಾಶ್ಚ್ಯಾತರ ಆಹಾರ ಕ್ರಮಕ್ಕೆ ಮಾರು ಹೋಗಬೇಡಿ ಎಂದು ಡಾ. ಬಿ.ಎಂ. ಹೆಗ್ಡೆ ಹೇಳಿದರು.

ಆಳ್ವಾಸ್‌ನಲ್ಲಿ ಸಾಂಸ್ಕೃತಿಕ ವೈಭವದ ರಸದೌತಣ

ವಿದ್ಯಾಗಿರಿ ಆವರಣ 10 ಬೃಹತ್ ವೇದಿಕೆಗಳಲ್ಲಿ ಶುಕ್ರವಾರ ಸಾಂಸ್ಕೃತಿಕ ವೈಭವವು ಸಾವಿರಾರು ಮಂದಿಗೆ ರಸದೌತಣ ನೀಡಿತು. ಆಳ್ವಾಸ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹೊರ ಜಿಲ್ಲೆ, ಹೊರ ರಾಜ್ಯದ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಹಿಂದೂಸ್ಥಾನಿ ಜುಗಲ್‌ಬಂದಿ ಗಾಯನ, ನೃತ್ಯಾಕರ್ಷಣಂ, ಹುಲಿವೇಷ ಕುಣಿತ, ರಂಗಗೀತೆ, ಗೀತಲಹರಿ, ಸ್ಯಾಕ್ಸೋಫೋನ್ ವಾದನ, ಹರಿಕಥಾ ಕೀರ್ತನೆ, ತತ್ತ್ವಪದ, ಭರತನಾಟ್ಯ, ತೆಂಕುತಿಟ್ಟು ಯಕ್ಷಗಾನ,ಸಂಗೀತ ಸೌರಭ, ತೆಲಿಕೆದ ಗೊಂಚಲ್, ಹಾಸ್ಯೋಲ್ಲಾಸ, ವೀಣಾವಾದನ, ಹಿಂದೂಸ್ಥಾನಿ ಗಾಯನ, ವಯೋಲಿನ್ ವಾದನ, ನೃತ್ಯಾನುಭವ, ಹರಿಕಥಾ ಕೀರ್ತನ, ಕೂಚಿಪುಡಿ ನೃತ್ಯ, ಭಕ್ತಿಗೀತೆಗಳು, ಜನಪದ ಹಾಡುಗಳು, ಯುಗಳ ಕಥಕ್‌ನೃತ್ಯ, ನೃತ್ಯಾಮೃತಂ, ತೊಗಲು ಗೊಂಬೆಯಾಟ ಇತ್ಯಾದಿ ಜನಮನ ಸೂರೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News