ಅಕ್ರಮ ಮರಳು ಅಡ್ಡೆಗೆ ದಾಳಿ
ಬಂಟ್ವಾಳ, ನ. 18: ಸರಪಾಡಿ ಗ್ರಾಮದ ಮಣಿನಾಲ್ಕೂರು, ಕಡವಿನಬಾಗಿಲು, ಅರ್ಮುಡಿ, ಪೆರ್ಲ, ಬಿಯಾಪಾದೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಶುಕ್ರವಾರ ಮುಂಜಾನೆ ದಾಳಿ ನಡೆಸಿದ ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳು ಸೊತ್ತು ವಶಪಡಿಸಿಕೊಂಡಿದ್ದಾರೆ. ಕೆಲವು ತಿಂಗಳಿನಿಂದ ಈ ಭಾಗದ ನೇತ್ರಾವತಿ ನದಿ ಬದಿಯಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆಯುತ್ತಿದೆ. ಈ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಇಂದು ಮುಂಜಾನೆ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ನದಿ ತಟದಲ್ಲಿ ಮರಳುಗಾರಿಕೆಯ ಕಾರ್ಮಿಕರು ತಂಗಲು ನಿರ್ಮಿಸಿದ್ದ ಡೇರೆಯನ್ನು ತೆರವು ಗೊಳಿಸಿದರು.ಡೇರೆಗಳಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್, ಸ್ಟವ್, ಹಾರೆ, ಬುಟ್ಟಿ ಇನ್ನಿತರ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮರಳುಗಾರಿಕೆ ನಡೆಸುತ್ತಿದ್ದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಂತೆ, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ನೇತೃತ್ವದಲ್ಲಿ, ಗ್ರಾಮ ಕರಣಿಕರಾದ ಜನಾರ್ಧನ್, ಪ್ರವೀಣ್, ರಾಜು ಲಮಾಣಿ, ಅನಿಲ್, ನಿಂಗಪ್ಪ, ಸಿಬ್ಬಂದಿಯಾದ ವೆಂಕಟರಮಣ, ಲೋಕನಾಥ್, ಸಂತೋಷ್, ಸಂದೀಪ್. ಕೆ, ರಮೇಶ್. ಬಾಬು. ತಿಲಕ್ ರಾಜ್ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.