ಎಂಟು ಸಾಮಾನ್ಯ ಸಭೆ ನಡೆಸದರೂ ತಾಪಂ ಸದಸ್ಯರಿಗೆ ಸಿಗದ ಗೌರವಧನ
ಬಂಟ್ವಾಳ, ನ. 18: ತಾಲೂಕು ಪಂಚಾಯತ್ ಚುನಾವಣೆ ಬಳಿಕ ಎಂಟು ಸಾಮಾನ್ಯ ಸಭೆ ನಡೆದರೂ ಈವರೆಗೆ ನಮಗೆ ಗೌರವಧನ ಪಾವತಿಯಾಗಿಲ್ಲ ಎಂದು ತಾಪಂ ಸದಸ್ಯೆ ಪದ್ಮಾವತಿ ಶುಕ್ರವಾರ ಬಿ.ಸಿ.ರೋಡ್ ಎಸ್‌ಜಿಎಸ್‌ಆರ್‌ವೈ ಸಭಾಂಗಣದಲ್ಲಿ ನಡೆದ 2015-16ನೆ ಸಾಲಿನ ಜಮಾಬಂದಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯೆಯ ಅಸಮಾಧಾನ ಕಂಡು ಒಂದು ಕ್ಷಣ ದಂಗಾದ ದಕ ಜಿಪಂ ಉಪ ಕಾರ್ಯದರ್ಶಿ ಉಮೇಶ್, ಈ ಬಗ್ಗೆ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದಾರಿಂದ ಮಾಹಿತಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಸದಸ್ಯರಿಗೆ ಗೌರವಧನ ನೀಡಲು ಸಾಧ್ಯವಾಗಿಲ್ಲ. ತಾಂತ್ರಿಕ ದೋಷ ಸರಿಪಡಿಸುವ ಕೆಲಸ ನಡೆಯುತ್ತಿದ್ದು ಶ್ರೀರ್ಘದಲ್ಲೇ ಎಲ್ಲ ಸದಸ್ಯರಿಗೆ ಗೌರವಧನ ವಿತರಿಸಲಾಗುವುದು ಎಂದರು.
ಗೌರವಧನ ನೀಡದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ಉಪಖಜಾನೆ ಸಿಬ್ಬಂದಿಯನ್ನು ಸಭೆಗೆ ಕರೆಸಿ ವಿವರ ಪಡೆದ ಉಮೇಶ್, ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ನಡೆಸಿ ಶೀರ್ಘದಲ್ಲೇ ಗೌರವಧನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಚುನಾವಣಾ ಸಂದರ್ಭದ ಖರ್ಚು ವೆಚ್ಚದ ಲೆಕ್ಕಪತ್ರಗಳನ್ನು ತಾಪಂಗೆ ಸಲ್ಲಿಸಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ ಪದೇ ಪದೇ ನೋಟಿಸ್ ಬರುತ್ತಿದ್ದು ನಾವು ಮುಜುಗರಕ್ಕೊಳಗಾಗುತ್ತಿದ್ದೇವೆ ಎಂದು ತಾಪಂ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಸಭೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸದಸ್ಯರು ಸಲ್ಲಿಸಿರುವ ಚುನಾವಣಾ ಖರ್ಚು ವೆಚ್ಚದ ವಿವರವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಡುವಲ್ಲಿ ವಿಳಂಬವಾಗಿರುವುದರಿಂದ ಈ ಎಡವಟ್ಟು ಉಂಟಾಗಿತ್ತು. ಇದೀಗ ಸದಸ್ಯರ ವಿವರಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ ಎಂದು ಚರ್ಚೆಗೆ ತೆರೆ ಎಳೆದರು.
ತಾಲೂಕು ಪಂಚಾಯತ್‌ನ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು ಇದರಿಂದಾಗಿ ಅನುದಾನಗಳು ಖರ್ಚಾಗದೆ ಉಳಿಕೆಯಾಗುತ್ತಿದೆ ಎಂದು ಸುಪ್ರಿಯಾ ಮಿರಾಂದ ಉಮೇಶ್‌ರವರ ಗಮನ ಸೆಳೆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್, ಎಸ್‌ಸಿ, ಎಸ್‌ಟಿಗೆ ಸಂಬಂಧಿಸಿದ ಯಾವುದೇ ಅನುದಾನ ಉಳಿಕೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ತಾಪಂ ಅಧೀನದಲ್ಲಿರುವ ಎಲ್ಲ ಇಲಾಖೆಗಳು ತಾಪಂನಿಂದ ಬಿಡುಗಡೆಗೊಳ್ಳುವ ಅನುದಾನದ ಖರ್ಚು ವೆಚ್ಚಗಳನ್ನು ತಾಪಂಗೆ ಕಡ್ಡಾಯವಾಗಿ ನಿಗದಿತ ಸಮಯದೊಳಗೆ ಸಲ್ಲಿಸುವಂತೆ ಸೂಚಿಸಿದ ಅವರು, ವೇತನ ಮತ್ತು ವೇತನೇತರ ಅನುದಾನದಲ್ಲಿ ಕಡಿಮೆಯಾದರೆ ಅದಕ್ಕೆ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸಿ. ತಿಂಗಳ ಕೆಡಿಪಿ ಸಭೆ ಬಳಿಕ ಎಲ್ಲ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರರಿಗೆ ತಿಳಿಸಿದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷೀ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.