ತೆಂಗಿನ ಉತ್ಪನ್ನ ಬೆಲೆಕುಸಿತದಿಂದ ಬೆಳೆಗಾರ ಕಂಗಾಲು

Update: 2016-11-18 13:59 GMT

ಉಡುಪಿ, ನ.12: ತೆಂಗಿನ ಉತ್ಪನ್ನಗಳ ಬೆಲೆ ಕುಸಿತದಿಂದ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ವರ್ಷದಿಂದ ವರ್ಷಕ್ಕೆ ತೆಂಗು ಬೆಳೆಯುವ ಪ್ರದೇಶದಲ್ಲಿ ಯಾವುದೇ ಏರಿಕೆಯಾಗುತ್ತಿಲ್ಲ. ತೆಂಗಿಗೆ ಬೇಡಿಕೆ ಹೆಚ್ಚುತಿದ್ದರೂ ದರದಲ್ಲಿ ಮಾತ್ರ ಯಾವುದೇ ಚೇತರಿಕೆ ಕಾಣುತ್ತಿಲ್ಲ. ಇದರಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ ಹೇಳಿದ್ದಾರೆ.

ಸರಕಾರಗಳು ತೆಂಗಿನಎಣ್ಣೆ ಹಾಗೂ ಅದರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡದೆ ಪಾಮ್ ಹಾಗೂ ಸೂರ್ಯಕಾಂತಿ ಎಣ್ಣೆಗಳಿಗೆ ನೀಡುತ್ತಿರುವ ಉತ್ತೇಜನ, ದರ ಕುಸಿತಕ್ಕೆ ಇನ್ನೊಂದು ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ನೀತಿಗಳು ಬದಲಾಗಬೇಕು. ಪಡಿತರ ವ್ಯವಸ್ಥೆಯ ಜೊತೆಗೆ ನೀಡುವ ಎಣ್ಣೆಯಲ್ಲಿ ತೆಂಗಿನೆಣ್ಣೆಗೆ ಪ್ರಾಧಾನ್ಯತೆ ನೀಡಬೇಕು. ಜೊತೆಗೆ ತೆಂಗಿನಕಾಯಿ, ಎಳನೀರು, ಎಣ್ಣೆಗಳ ಬಗ್ಗೆ ಜಾಹಿರಾತು ನೀಡಿ ಜನರಲ್ಲಿ ಆಸಕ್ತಿ ಮೂಡಿಸಬೇಕು. ಆಗ ಮಾತ್ರ ರೈತರಿಗೆ ಉತ್ತಮ ಧಾರಣೆ ಸಿಗಲು ಸಾಧ್ಯ ಎಂದವರು ಸಲಹೆ ನೀಡಿದರು.

ಸರಕಾರದ ಅಧೀನದಲ್ಲಿರುವ ದೇವಸ್ಥಾನಗಳಿಗೆ ತೆಂಗಿನ ಕಾಯಿ ಮತ್ತು ಎಣ್ಣೆಗಳನ್ನು ಜಿಲ್ಲಾಮಟ್ಟದ ರೈತರು ಹಾಗೂ ರೈತರ ಸಂಸ್ಥೆಗಳಿಂದಲೇ ಖರೀದಿಸ ಬೇಕು. ಹೊರರಾಜ್ಯಗಳಿಂದ ಆಮದಿಗೆ ಅವಕಾಶ ನೀಡಬಾರದು. ಪಡಿತರ ವ್ಯವಸ್ಥೆಯೊಂದಿಗೆ ಹಂಚಲಾಗುವ ಪಾಮ್‌ಎಣ್ಣೆ ಹಾಗೂ ಇತರ ಎಣ್ಣೆಗಳನ್ನು ನಿಲ್ಲಿಸಿ ತೆಂಗಿನ ಎಣ್ಣೆಗೆ ಅವಕಾಶ ಮಾಡಿಕೊಡಬೇಕು. ತೆಂಗಿನಎಣ್ಣೆಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತಡೆಗಟ್ಟಲು ಸರಕಾರ ಕ್ರಮಕೈಗೊಳ್ಳಬೇಕು ಇವೇ ಮೊದಲಾದ ಬೇಡಿಕೆಗಳನ್ನು ಸರಕಾರದ ಮುಂದಿಡಲು ನಿರ್ಣಯಿಸ ಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ, ಪದಾಧಿಕಾರಿಗಳಾದ ವಾಸುದೇವ ಶ್ಯಾನುಬಾಗ್,ಸದಾನಂದ ಶೆಟ್ಟಿ, ಸೀತಾರಾಮ ಉಡುಪ, ಶ್ರೀನಿವಾಸ ಶೆಟ್ಟಿ, ರಾಮ್‌ರಾವ್, ಜಯರಾಮ ಉಡುಪ, ಎಸ್. ಎಂ. ರಾವ್, ದೀಪಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಆಸ್ತೀಕ ಶಾಸ್ತ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News