ಮಗುವಿಗೆ ಅಪರೂಪದ ಕಾಯಿಲೆ: ಚಿಕಿತ್ಸೆ ನೆರವಿಗೆ ಮನವಿ
ಉಡುಪಿ, ನ.17: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮಳ ಚಿಕಿತ್ಸೆಗೆ ನೆರವು ಕಲ್ಪಿಸುವಂತೆ ಪೋಷಕರು ದಾನಿಗಳಲ್ಲಿ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗದ ಕಾಡ ರಾಯನ ಹಳ್ಳಿಯ ನಿವಾಸಿ ಜಗದೀಶ್ ಮತ್ತು ಶೋಭಾ ದಂಪತಿಯ ಪುತ್ರಿ ಒಂದು ವರ್ಷ ಒಂಭತ್ತು ತಿಂಗಳ ಪನ್ವಿಕ ಎಂಬಾಕೆ ತಲಸಿಮಿಯ(ರಕ್ತಹೀನತೆ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. 9 ತಿಂಗಳ ಮಗುವಾಗಿದ್ದ ಪನ್ವಿಕಳಿಗೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ನೀಡಿದ ಔಷಧಿಯನ್ನು ಕೊಡಲಾಗುತ್ತಿತ್ತು. ಆದರೆ ಕಾಯಿಲೆ ಗುಣ ಮುಖವಾಗದ ಕಾರಣ ಆಕೆಯನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಲಾಯಿತು.
ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ತಲಸಿಮಿಯ ಕಾಯಿಲೆ ಎಂಬುದಾಗಿ ತಿಳಿಸಿದರು. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು 25 ರಿಂದ 27ಲಕ್ಷ ರೂ. ಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಜಗದೀಶ್ ಅವರದ್ದು ತೀರಾ ಬಡ ಕುಟುಂಬ. ಇವರು ಕಳೆದ 15ವರ್ಷ ಗಳಿಂದ ಉಡುಪಿಯ ಹೊಟೇಲಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಇಷ್ಟು ದೊಡ್ಡದ ಮೊತ್ತ ಭರಿಸಲು ಈ ಕುಟುಂಬಕ್ಕೆ ಸಾಧ್ಯವಾಗದ ಕಾರಣ ಅವರು ದಾನಿಗಳ ನೆರವನ್ನು ಯಾಚಿಸಿದ್ದಾರೆ.
ಚಿಕಿತ್ಸೆ ನೆರವು ನೀಡಲು ಇಚ್ಛಿಸುವವರು ಜಗದೀಶ್ ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖೆ, ಖಾತೆ ಸಂಖ್ಯೆ- ಎಸ್‌ಬಿ 20345815707 ಮತ್ತು ಐಎಸ್‌ಎಫ್‌ಸಿ ಕೋಡ್- ಎಸ್‌ಬಿಐಎನ್ 0000945ಕ್ಕೆ ಹಣ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ- 7353331952ನ್ನು ಸಂಪರ್ಕಿಸಬಹುದು.