ಕ್ರೀಡೆಯ ಮೂಲಕ ಜಡತ್ವ ಹೋಗಲಾಡಿಸಿ ಕ್ರಿಯಾಶೀಲತೆ ಬೆಳೆಸಿಕೊಳ್ಳಿ : ಮೀನಾಕ್ಷಿ ಶಾಂತಿಗೋಡು
ಪುತ್ತೂರು,ನ.18: ಕ್ರೀಡೆಯು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಜಡತ್ವವನ್ನು ಹೋಗಲಾಡಿಸಿ, ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಹೇಳಿದರು.
ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಪ್ಯ ಪೊಲೀಸ್ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ಅವರು ಮಾತನಾಡಿ, ಕ್ರೀಡೆ ಎಂಬುದು ಮನುಷ್ಯನ ಜೀವನದಲ್ಲಿ ಶಿಸ್ತನ್ನು ಬೆಳೆಸುವ ಒಂದು ಉತ್ತಮ ಚಟುವಟಿಕೆಯಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಶಿಸ್ತು, ಮಾನಸಿಕ ಬೆಳವಣಿಗೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಅವರು ನಮ್ಮ ದೇಶದಲ್ಲಿ ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗುಗಳು ತಾಂಡವವಾಡುತ್ತಿದ್ದು, ವಿದ್ಯಾರ್ಥಿಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ವಾತಾವರಣವನ್ನು ಸೃಷ್ಠಿಸಿ, ಉತ್ತಮ ರಾಷ್ಟ್ರ ನಿರ್ಮಾಣ ಮಾಡುವಲ್ಲಿಪ್ರಯತ್ನಿಸಬೇಕು ಎಂದರು.
ಗೌರವಾರ್ಪಣೆ : ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ವಾಟರ್ ಪೋಲೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಕರ್ನಾಟಕ ತಂಡದ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಕಾಲೇಜಿನ ಪ್ರತಿಭಾವಂತ ಕ್ರೀಡಾಪಟುಗಳಾದ ಸಿದ್ಧಾಂತ್ ಎಸ್ ಶೆಟ್ಟಿ ಮತ್ತು ದೀಕ್ಷಿತ್ ದಿವಾಕರ್ ಹಾಗೂ ಇದೇ ಕೂಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಸುಹಾಸ್ ಪಿ ಎಂ ಅವರನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಲಿಯೊ ನೊರೊನ್ಹ ಅವರು ಗೌರವಿಸಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೆರೊ, ಫಿಲೋಮಿನಾ ಕಾಲೇಜಿನ ಪುರುಷರ ವಸತಿ ನಿಲಯದ ಮೇಲ್ವಿಚಾರಕ ರಿತೇಶ್ ರೋಡ್ರಿಗಸ್ ಮತ್ತು ಮಹಿಳಾ ವಸಿತಿ ನಿಲಯದ ಮೇಲ್ವಿಚಾರಕಿಸಿ. ರೋಸಿ ಸಲ್ದಾನಾ ಇದ್ದರು.
ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಅವರು ಸ್ವಾಗತಿಸಿದರು. ಶಾರೀರಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸ ರಾಹುಲ್ ನಿರೂಪಿಸಿದರು.