×
Ad

ಸರ್ಕಾರಿ ಸ್ಥಳ ಅತಿಕ್ರಮಣವಾಗಿದಲ್ಲಿ ಎರಡೇ ದಿನದಲ್ಲಿ ಒತ್ತುವರಿ ತೆರವು

Update: 2016-11-18 20:51 IST

ಪುತ್ತೂರು,ನ.18 : ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಸ್ಥಳವಿದ್ದಲ್ಲಿ, ಸರ್ಕಾರಿ ಸ್ಥಳವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ತನಗೆ ತಿಳಿಸಿ, ಎರಡೇ ದಿನದಲ್ಲಿ ಒತ್ತುವರಿ ತೆರವುಗೊಳಿಸಿ, ಅಲ್ಲಿ ಯಾವ ಅಭಿವೃದ್ಧಿಯಾಗಬೇಕೋ ಅದಕ್ಕೆ ಪೂರ್ಣ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಅವರು ಹೇಳಿದರು.

 ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿನ ಒತ್ತುವರಿ ಆಗಿರುವ ಸರ್ಕಾರಿ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಪಡಿಸುವುದು. ಅಕ್ರಮ ಸಕ್ರಮದಲ್ಲಿ ಒತ್ತುವರಿ ಮಾಡಿದ ಜಾಗವನ್ನು ಮತ್ತೆ ಸರ್ಕಾರ ಹೇಗೆ ಸ್ವಾಧೀನ ಮಾಡಿಕೊಳ್ಳುವುದು ಹಾಗೂ ಇತರ ಅಭಿವೃದ್ಧಿ ಕುರಿತು ಶುಕ್ರವಾರ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

  ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಸ್ಥಳವಿವೆ. ಅದನ್ನು ಯಾರೋ ಒತ್ತುವರಿ ಮಾಡುವ ಬದಲು ಸರ್ಕಾರದ ಉತ್ತಮ ಕೆಲಸಕ್ಕೆ ಬಳಸುವಂತಾಗಬೇಕು. ಬಲ್ನಾಡಿನಲ್ಲಿ 12 ಎಕ್ರೆ ಸರ್ಕಾರಿ ಸ್ಥಳವಿದೆ. ನಗರಸಭೆಗೆ ಕೇವಲ 3.5 ಎಕ್ರೆ ಸ್ಥಳ ಮಾತ್ರ ಸಿಕ್ಕಿದೆ. ಉಳಿದ ಸ್ಥಳ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದ ಅವರು ಬೀರುಮಲೆ ಬೆಟ್ಟ ಅಭಿವೃದ್ಧಿಯಾಗಬೇಕು. ಮುಂದಿನ 20 ವರ್ಷಗಳನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ಹಾಕಿಕೊಳ್ಳಬೇಕು ಎಂದು ಅವರು ತಿಳಿಸಿದರು.  ನಗರಸಭೆಯ ಸದಸ್ಯ ರಾಮಣ್ಣ ಗೌಡ ಅವರು ಮಾತನಾಡಿ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲೂ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಅವರು ಮಾತನಾಡಿ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಾ ಸರ್ಕಾರಿ ಸೌಲಭ್ಯವಿದೆ ಎಂಬುದು ನಿಮ್ಮ ಅಧಿಕಾರಿಗಳಿಗೆ ಗೊತ್ತಿದೆ. ಆದರೆ ಅವರು ಬಾಯಿ ಬಿಡುವುದಿಲ್ಲ. ನಮಗೂ ಎಲ್ಲೆಲ್ಲಾ ಇದೆ ಎಂದು ಗೊತ್ತಿದೆ. ಆದರೆ ನಾವು ರಾಜಕೀಯ ಪಕ್ಷದಲ್ಲಿರುವಾಗ ಇದನ್ನು ಇಲ್ಲಿ ನಾವು ಹೇಳಲು ಆಗುವುದಿಲ್ಲ. ಬೇಕಿದ್ದರೆ ನಿಮ್ಮೊಂದಿಗೆ ಪ್ರತ್ಯೇಕ ಮಾತನಾಡಿ ಎಲ್ಲೆಲ್ಲಾ ಸರ್ಕಾರಿ ಸ್ಥಳವಿದೆ ಎಂದು ತಿಳಿಸಬಹುದು ಎಂದರು. ಇದಕ್ಕೆ ಸದಸ್ಯ ಜೀವಂಧರ್ ಜೈನ್ ಅವರು ಧ್ವನಿಗೂಡಿಸಿದರು.

ಪುತ್ತೂರಿನ ‘ಸಂತೆ’ ಗೆ ಸಂಬಂಧಿಸಿ ಪರ ವಿರೋಧಗಳು ಬಂದಿದೆ. ಸಂತೆ ಬೇಕು ನಿಜ. ಆದರೆ ಅದು ಎಲ್ಲಿ ಬೇಕು. ಹೇಗೆ ಇರಬೇಕೆಂಬುದನ್ನು ಮೊದಲು ಯೋಚಿಸಬೇಕು. ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸುವುದರಿಂದ ಯಾರಿಗೆ ತೊಂದರೆ ಎಂಬುದನ್ನು ಅರಿತುಕೊಳ್ಳಬೇಕು. ಇವೆಲ್ಲವನ್ನು ಬಿಟ್ಟು ಸಂತೆ ಇಲ್ಲದೆ ಪುತ್ತೂರಿಗೆ ಉಳಿಗಾಲವಿಲ್ಲ ಎಂದಾದರೆ ಮತ್ತೆ ಹಿಂದಿನ ಸ್ಥಳಕ್ಕೆ ಬರಬೇಕು. ಅದು ಕೂಡಾ ಕೊನೆಯ ಹಂತದಲ್ಲಿ ಮಾತ್ರ ಎಂದ ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸಂತೆ ಕಿಲ್ಲೆ ಮೈದಾನದಲ್ಲೇ ಉಳಿಯಬೇಕಾದರೆ ನಾಲ್ಕು ಶರತ್ತುಗಳನ್ನು ಮುಂದಿಟ್ಟರು.  ಸಂತೆ ವಿಚಾರದಲ್ಲಿ ಬರಿ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸೇರಿಕೊಂಡು ಹೋದಾಗ ಸಮಸ್ಯೆ ಬಗೆ ಹರಿಯವುದಿಲ್ಲ. ಸಾರ್ವಜನಿಕರನ್ನು ಜೋಡಿಸಿಕೊಂಡು ಹೋಗಬೇಕಾಗುತ್ತದೆ. ಕಿಲ್ಲೆ ಮೈದಾನದಲ್ಲಿ ನಡೆದ ಸಂತೆಯಿಂದ ಸ್ಥಳೀಯರಿಗೆ ಮಾತ್ರ ಪ್ರಯೋಜನವಾಗಿರಬಹುದು. ದೂರದವರಿಗೆ ಎಲ್ಲಿಯಾದರೂ ಒಂದೇ. ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಸಂತೆ ನಡೆಯುತ್ತಿರಬಹುದು. ಆದರೆ ಪುತ್ತೂರಿಗೆ ಸಂಬಂಧಿಸಿ ಏನಿದ್ದರೂ ನಾವು ಸ್ಥಳೀಯವಾಗಿ ಚಿಂತಿಸದೆ ಮಂಗಳೂರು ಜೊತೆ ಸ್ಪರ್ಧಿಸಬೇಕು ಎಂದು ಅವರು ತಿಳಿಸಿದರು.

    ಈ ನಿಟ್ಟಿನಲ್ಲಿ ಸಂತೆಗೆ ಪರ್ಯಾಯ ಜಾಗ ಖರೀದಿ ಮಾಡಬೇಕು ಅಥವಾ ಎಪಿಎಂಸಿಗೆ ಹೋಗಬೇಕು. ಆದರೆ ಸಂತೆ ಪರ ವಿರೋಧಗಳು ಹೆಚ್ಚಾಗಿದ್ದು, ಇಲ್ಲಿ ಕೆಲವರು ಖಾಸಗಿಯಾಗಿ ಸಂತೆ ನಡೆಸಿಕೊಂಡು ಎಪಿಎಂಸಿ ಸಂತೆಯನ್ನು ಬೆಳೆಯಲು ಬಿಡುತ್ತಿಲ್ಲ. ಹೀಗಿರುವಾಗ ನಗರಸಭೆಯ ಸದಸ್ಯರು ಸೇರಿಕೊಂಡು ಒಟ್ಟು ನಿರ್ಣಯ ಕೈಗೊಳ್ಳಬೇಕು. ಇಲ್ಲಿ ನಾನು ಹೇಳಿದ್ದೇ ಆಗಬೇಕೆಂದು ನನಗಿಲ್ಲ. ಸೋಮವಾರ ದಿನ ಸಂತೆ ರಸ್ತೆ ಬದಿಯಲ್ಲಿ ಸಂತೆ ನಡೆಸುವುದರಿಂದ ಕಚೇರಿಗೆ ಹೋಗುವವರಿಗೆ ತುಂಬಾ ತೊಂದರೆ ಆಗುತ್ತದೆ ಎಂಬುದನ್ನು ಗಮನಿಸಿಕೊಳ್ಳಬೇಕು ಎಂದ ಅವರು ಸಂತೆ ಇಲ್ಲದೆ ಪುತ್ತೂರಿಗೆ ಉಳಿಗಾಲವಿಲ್ಲ ಎಂದಾದರೆ ಮತ್ತೆ ಹಿಂದಿನ ಜಾಗದಲ್ಲೇ ಸಂತೆ ಮಾಡುವ ಕುರಿತು ಚಿಂತಿಸೋಣ ಎಂದು ತಿಳಿಸಿದರು.

ಸಂತೆ ಕಿಲ್ಲೆ ಮೈದಾನದಲ್ಲೇ ನಡೆಯಲಿ

  ನಗರಸಭಾ ಸದಸ್ಯ ರಾಜೇಶ್ ಬನ್ನೂರು ಅವರು ಮಾತನಾಡಿ ಸಂತೆ ಇಲ್ಲೇ ನಡೆಯಬೇಕೆಂದು ಬಿಜೆಪಿ, ಕಮ್ಯುನಿಷ್ಟ್, ದಳ, ಕಾಂಗ್ರೆಸ್ ಪಕ್ಷಗಳ ಒಕ್ಕೊರಳಿನ ಅಭಿಪ್ರಾಯವಿದೆ. ಆದರೆ ಅ.12ಕ್ಕೆ ನೀವು ಸಂತೆಯನ್ನು ಯಾಕೆ ಸ್ಥಳಾಂತರಿಸಬಾರದು ಎಂಬ ಪ್ರಶ್ನೆ ಮಾಡಿದ್ದೀರಿ. ಇದಕ್ಕೆ ನಾವು ಮಾರನೆ ದಿನ ನಗರಸಭೆ ಸದಸ್ಯರು ಮತ್ತು ತರಕಾರಿ ವ್ಯಾಪಾರಸ್ಥರು, ಸಾರ್ವಜನಿಕರು ಸೇರಿಕೊಂಡು ಆಕ್ಷೇಪ ಕೊಟ್ಟಿದ್ದೇವೆ. ರಸ್ತೆಯನ್ನು ಬಿಟ್ಟು ಕಿಲ್ಲೆ ಮೈದಾದನದ ಸೀಮಿತ ಜಾಗದಲ್ಲಿ ಮಾತ್ರ ಸಂತೆ ನಡೆಯಲಿ ಎಂಬುದು ನಮ್ಮ ಅಭಿಪ್ರಾಯ. ಹಾಗೆಂದು ನಾವು ಎಪಿಎಂಸಿಯಲ್ಲಿ ಸಂತೆ ನಡೆಸುವುದಕ್ಕೆ ವಿರೋಧವಿಲ್ಲ. ಅಲ್ಲಿ ಬೇಕಾದರೆ 24 ಗಂಟೆಯೂ ಸಂತೆಯು ನಡೆಯಲಿ ಎಂದರು. ಮುಂದೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಜಾಗವನ್ನು ಸರ್ಕಾರ ಖರೀದಿ ಮಾಡಿದ ಬಳಿಕ ಸಂತೆ ಸ್ಥಳಾಂತರ ಮಾಡೋಣ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸಿ ಪರವಾಗಿ ನಮ್ಮ ನಿರ್ಣಯ

    ನಗರಸಭಾ ಸದಸ್ಯ ಹೆಚ್. ಮಹಮ್ಮದ್ ಆಲಿ ಅವರು ಮಾತನಾಡಿ ಈ ಹಿಂದೆ ತರಕಾರಿ ಮಾರುಕಟ್ಟೆ ನಗರಸಭೆಯ ಕಟ್ಟಡ ಇರುವ ಸ್ಥಳದಲ್ಲಿ ಇತ್ತು. ಆದರೆ ಅಲ್ಲಿ ಕಟ್ಟಡ ಆದ ಬಳಿಕ ಮತ್ತೆ ಕಟ್ಟಡದ ತಳಭಾಗದಲ್ಲಿ ತರಕಾರಿ ಮಾರುಕಟ್ಟೆ ಮಾಡಲು ಅವಕಾಶ ಕೊಡುವುದಾಗಿ ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಕಟ್ಟಡದ ತಳಭಾಗದಲ್ಲಿ 22 ಅಂಗಡಿಗೆ ಮಾತ್ರ ಅವಕಾಶವಿದ್ದರಿಂದ ಆ ಯೋಜನೆ ವಿಫಲವಾಗಿದೆ. ಹಾಗಾಗಿ ಸಂತೆ ಕಿಲ್ಲೆ ಮೈದಾನದಲ್ಲಿ ಉಳಿಯಿತ್ತು. ಸಂತೆ ಸ್ಥಳಾಂತರ ಕುರಿತು ನಗರಸಭೆಯ ಮೂವರು ವಕೀಲರಲ್ಲಿ ಇಬ್ಬರು ವಕೀಲರು ಉಪವಿಭಾಗಾಧಿಕಾರಿಗಳ ನಿರ್ಣಯ ಸರಿಯಾಗಿದೆ ಎಂದು ಅಭಿಪ್ರಾಯ ಸೂಚಿಸಿದ್ದಾರೆ. ಮುಂದೆ ಸಂತೆಗಾಗಿ ಬದಲಿ ಜಾಗ ನೋಡಲಾಗುವುದು ಎಂದು ಉಪವಿಭಾಗಾಧಿಕಾರಿಗಳಿಗೆ ನಾವು ತಿಳಿಸಿದ್ದೇವೆ ಎಂದ ಅವರು ಸಾರ್ವಜನಿಕರಿಗೆ, ಕಚೇರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಆದಿತ್ಯವಾರವೂ ಸಂತೆ ಮಾಡಬಹುದು ಎಂದು ಸಲಹೆ ನೀಡಿದರು.

 ನಗರಸಭಾ ಸದಸ್ಯ ಜೀವಂಧರ್ ಜೈನ್ ಅವರು ಮಾತನಾಡಿ ಸಂತೆಗಾಗಿ ಹಿಂದಿನ ಆಡಳಿತ ಮಹಾಲಿಂಗೇಶ್ವರ ದೇವಾಲಯದ ಗದ್ದೆಯ ತುದಿಯ ಭಾಗದಲ್ಲಿರುವ ಖಾಸಗಿ 92 ಸೆಂಟ್ಸ್ ಸ್ಥಳವನ್ನು ಖರೀದಿಸುವ ಕುರಿತು ಮಾತುಕತೆ ನಡೆಸಿತ್ತು. ಅದರ ಕಡತ ಕೂಡಾ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಯೋಜನೆ ಜಾರಿ ಮಾಡುತ್ತಿದ್ದಂತೆ ಹಣದ ಕೊರತೆ ಉಂಟಾಗಿತ್ತು. ಆದರೆ ಅದನ್ನು ಇನ್ನೂ ಕಾರ್ಯಗತಗೊಳಿಸಲಾಗಿಲ್ಲ. ಜಾಗದ ಮಾಲಕರೂ ಸಹ ಕಂತು ಪ್ರಕಾರವಾಗಿ ಹಣ ಪಡೆಯುವಂತೆ ನಮ್ಮಲ್ಲಿ ಒಪ್ಪಿಕೊಂಡಿದ್ದರು. ಇಂತಹ ಸಮಯದಲ್ಲಿ ಆ ಜಾಗ ಖರೀದಿ ಮಾಡುತ್ತಿದ್ದರೆ ಇಂದು ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಇನ್ನಾದರೂ ಆ ಜಾಗ ಖರೀದಿ ಮಾಡುವುದು ಉತ್ತಮ ಎಂದರು. ನಗರಸಭಾ ಸದಸ್ಯರಾದ ರಾಮಣ್ಣ ಗೌಡ, ವಿನಯ ಭಂಡಾರಿ ಅವರು ಸಹಮತ ಸೂಚಿಸಿದರು. ಪ್ರಥಮವಾಗಿ ಸಂತೆಗಾಗಿ ಜಾಗ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ, ಎರಡನೆಯದಾಗಿ ಶಾಸಕರಿಂದ ಅನುದಾನ, ಮೂರನೆಯದಾಗಿ ಸದಸ್ಯರ ಅನುದಾನದ ಒಂದು ಪಾಲಿನಿಂದ ಜಾಗ ಖರೀದಿ, ನಾಲ್ನೆಯದಾಗಿ ಎಪಿಎಂಸಿ ಜೊತೆ ಸೇರಿಕೊಂಡು ಜಾಗ ಖರೀದಿಸಿ, ನಿರ್ವಹಣೆ ಮಾತ್ರ ನಗರಸಭೆ ನೋಡಿಕೊಳ್ಳುವುದು. ಈ ಎಲ್ಲಾ ಮಾರ್ಗಗಳು ವಿಫಲವಾದರೆ ಆದರೆ ಕೊನೆಯ ಹಂತದಲ್ಲಿ ಯಾವುದೇ ವರ್ಕ್‌ಔಟ್ ಆಗುವುದಿಲ್ಲ ಎಂದಾದರೆ ಸಂತೆ ಹಿಂದಿನ ಸ್ಥಳಕ್ಕೆ ಸ್ಥಳಾಂತರ ಮಾಡುವುದು ಎಂದು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ನಾಲ್ಕು ಷರತ್ತುಗಳನ್ನು ಮುಂದಿಟ್ಟರು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ತಹಶೀಲ್ದಾರ್ ಅನಂತ ಶಂಕರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಭಂಡಾರಿ, ಸದಸ್ಯರಾದ ಮುಖೇಶ್ ಕೆಮ್ಮಿಂಜೆ, ಜೆಸಿಂತ ಮಸ್ಕರೇನ್ಹಸ್, ವನಿತಾ ಕೆ.ಟಿ, ಯಶೋದಾ ಹರೀಶ್, ನಾಮನಿರ್ದೇಶಿತ ಸದಸ್ಯ ಕೇಶವ, ಪೌರಾಯುಕ್ತೆ ರೂಪಾ ಶೆಟ್ಟಿ, ಸಹಾಯಕ ಇಂಜಿನಿಯರ್ ಚಂದ್ರ, ಹಿರಿಯ ಅರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ತೆರಿಗೆಸಂಗ್ರಹಕ ರಾಜೇಶ್ ನಾಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News