×
Ad

ಡಿ.11-17: ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ

Update: 2016-11-18 23:45 IST

ಉಡುಪಿ, ನ.18: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಶ್ರಯದಲ್ಲಿ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಡಿ.11ರಿಂದ 17ರವರೆಗೆ 17 ಮತ್ತು 19 ವರ್ಷ ವಯೋಮಿತಿ ಯೊಳಗಿನ ಬಾಲಕ-ಬಾಲಕಿಯರ 41ನೆ ರಾಷ್ಟ್ರೀಯ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪನ್ನು ಆಯೋಜಿಸಲಾಗುತ್ತಿದೆ.

ಸಂಸ್ಥೆಯ ಅಧ್ಯಕ್ಷ ಹಾಗೂ ಟೂರ್ನಿ ಸಂಘಟನಾ ಸಮಿತಿಯ ಪ್ರ.ಕಾರ್ಯದರ್ಶಿ ಮಾಜಿ ಶಾಸಕ ಕೆ.ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದರು.

 ಉಡುಪಿ ಅಜ್ಜರಕಾಡಿನಲ್ಲಿರುವ ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲ ವಿವಿಯ ಮರಿನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯಲ್ಲಿ ಒಟ್ಟು 700 ಆಟಗಾರರು, 100 ತೀರ್ಪುಗಾರರು ಭಾಗವಹಿಸಲಿದ್ದಾರೆ. ಮೊದಲೆರಡು ದಿನ ಅಂತಾರಾಜ್ಯ ಟೂರ್ನಿ ನಡೆದರೆ, ಡಿ.13ರಿಂದ 17 ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಸಿಂಗಲ್ಸ್, ಡಬಲ್ಸ್, ಮಿಕ್ಸೆಡ್ ಡಬಲ್ಸ್ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ. ಈ ಕೂಟದ ಪ್ರಶಸ್ತಿ ಮೊತ್ತ 6 ಲಕ್ಷ ರೂ. ಎಂದವರು ನುಡಿದರು.

ಡಿ.12ರ ಸಂಜೆ 5ಕ್ಕೆ ಅಜ್ಜರಕಾಡಿನಲ್ಲಿ ಟೂರ್ನಿಯ ಉದ್ಘಾಟನೆ ನಡೆಯಲಿದೆ. ಟೂರ್ನಿಯ ಯಶಸ್ವಿ ಸಂಘಟನೆಗೆ ಸಚಿವ ಪ್ರಮೋದ್ ಮಧ್ವರಾಜ್ ಗೌರವಾಧ್ಯಕ್ಷತೆಯಲ್ಲಿ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ. ಮಣಿಪಾಲ ವಿವಿಯ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷರಾಗಿ, ವಿವಿಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಕಾರ್ಯಾಧ್ಯಕ್ಷರಾಗಿ, ವೈ.ಸುಧೀರ್ ಕುಮಾರ್ ಖಜಾಂಚಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದವರು ವಿವರಿಸಿದರು.

ಡಾ.ವಿನೋದ್ ನಾಯಕ್, ಕಾರ್ಯದರ್ಶಿ ಅರುಣ್ ಶೇರಿಗಾರ್, ಜಂಟಿ ಕಾರ್ಯದರ್ಶಿಗಳಾದ ಎಂ.ಕಾಶಿರಾಮ್ ಪೈ, ಟಿ.ಎಸ್.ಝಫರುಲ್ಲಾ, ವೈ.ಸುಧೀರ್ ಕುಮಾರ್, ದೀಪಕ್ ಸಾಲ್ಯಾನ್, ಸಂದೀಪ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News