×
Ad

ಎಟಿಎಂ ಹಣ ವಂಚನೆ: ಐವರ ಬಂಧನ

Update: 2016-11-18 23:59 IST

ಕಾಸರಗೋಡು, ನ.18: ಅಮೆರಿಕನ್ ಪ್ರಜೆಗಳ ಎಟಿಎಂ ಮಾಹಿತಿಗಳನ್ನು ಸೋರಿಕೆ ಮಾಡಿ ಕೇರಳ ಹಾಗೂ ಇತರ ಕಡೆಗಳಲ್ಲಿ ಹಣ ವಂಚನೆಗೆ ಸಂಬಂಧಪಟ್ಟಂತೆ ಐದು ಮಂದಿಯನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಿದಾಯತ್‌ನಗರ ಚೆಟ್ಟುಂಗುಯಿಯ ಮುಹಮ್ಮದ್ ನಜೀಬ್(24), ಕಣ್ಣೂರು ಚೆರುಕುನ್ನುವಿನ ಕೆ.ವಿ.ಬಶೀರ್(31), ಕೆ.ವಿ.ಅಬ್ದುರ್ರಹ್ಮಾನ್(30), ಮುಳಿಯಾರ್ ಮೂಲಡ್ಕದ ಎ.ಎಂ.ಮುಹಮ್ಮದ್ ರಿಯಾಝ್(22),ಅಬ್ದುಲ್ ಮಹರೂಫ್ ಬಾಸಿತ್ ಅಲಿ(20) ಬಂಧಿತ ಆರೋ ಪಿಗಳು. ಇವರಿಂದ 2 ಐಷಾರಾಮಿ ಕಾರು, 1ಬೈಕ್ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಡದಲ್ಲಿದ್ದ ಮುಂಬೈಯ ಸೈಫ್ ಮತ್ತು ಉಪ್ಪಳದ ನೌಶಾದ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾ ಚರಣೆ ನಡೆಸಿ ನಗರದ ಆನೆಬಾಗಿಲು ರಸ್ತೆಯಲ್ಲಿ ಎರಡು ಕಾರು ಗಳಲ್ಲಿ ಸಂಚರಿಸುತ್ತಿದ್ದ ಇವರನ್ನು ಬಂಧಿಸಿದ್ದಾರೆನ್ನಲಾಗಿದೆ.

ಅಮೆರಿಕದ ರಹಸ್ಯ ಕೇಂದ್ರದಿಂದ ಆನ್‌ಲೈನ್ ಮೂಲಕ ಅಕೌಂಟ್ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆ, ಪಿನ್ ಸಂಖ್ಯೆ ಮೊದಲಾದವುಗಳ ಮಾಹಿತಿಗಳನ್ನು ಪಡೆದು ಸ್ವೈಪ್‌ಮೆಷಿನ್ ಮೂಲಕ ನಕಲಿ ಕ್ರೆಡಿಟ್‌ಕಾರ್ಡ್ ತಯಾರಿಸಿ ಜ್ಯುವೆಲ್ಲರಿ ಮಳಿಗೆ ಹಾಗೂ ಇನ್ನಿತರ ಕಡೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಮಾಗ್ರಿ ಖರೀದಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧಿತರಿಂದ 67 ಕ್ರೆಡಿಟ್ ಕಾರ್ಡ್‌ಗಳು, 7 ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್‌ಟಾಪ್, ಸ್ವೈಫ್‌ಮೆಷಿನ್, 2 ಐಷಾರಾಮಿ ಕಾರು ಮತ್ತು 1 ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

  ಬಂಧಿತ ನಜೀಬ್ ಈ ಹಿಂದೆ ಪುಣೆಯಲ್ಲಿ ನಡೆದ ನಕಲಿ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣದಲ್ಲಿ ಬಂಧಿತನಾದ ನ್ಯೂ ಅಮಾನ್ ಎಂಬಾತನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ನಿವಾಸಿಯೋರ್ವ ಇವರಿಗೆ ಅಕೌಂಟ್‌ಗಳ ಮಾಹಿತಿಗಳನ್ನು ಆನ್‌ಲೈನ್ ಮೂಲಕ ಸೋರಿಕೆ ಮಾಡಿದ್ದ ಎಂದು ಆರೋಪಿಗಳು ವಿಚಾರಣೆ ಸಂದರ್ಭ ತಿಳಿಸಿದ್ದಾರೆ.

 ಪರಾರಿಯಾಗಿರುವ ಉಪ್ಪಳದ ನೌಶಾದ್ ಎಂಬಾತ ಒಂದೂವರೆ ವರ್ಷದ ಹಿಂದೆ ದುಬೈಯಲ್ಲಿ ಇದೇ ರೀತಿ 30ಲಕ್ಷ ರೂ. ವಂಚನೆ ನಡೆಸಿ, ಬಂಧಿತನಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಂಡವು ಕಾಸರಗೋಡಿನ ಕೆಲ ಬಂಕ್ ಮತ್ತು ಮಳಿಗೆಗಳಲ್ಲಿ ಭಾರೀ ಪ್ರಮಾಣದ ವಂಚನೆ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

 ಚಿನ್ನಾಭರಣ ಮಳಿಗೆಗಳಲ್ಲೂ ವಂಚನೆ ನಡೆಸಿದ್ದಾರೆ. ವಂಚನೆಯ ಅರ್ಧಪಾಲನ್ನು ಮುಂಬೈಯಲ್ಲಿರುವ ಸೈಫ್ ಮೂಲಕ ಸೂತ್ರಧಾರ ಉತ್ತರಪ್ರದೇಶದ ನಿವಾಸಿಗೆ ತಲಪಿಸಲಾಗುತ್ತಿತ್ತು ಎಂದು ಬಂಧಿತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News