×
Ad

ನಗದು ನೀಡದ ಬ್ಯಾಂಕ್ ವಿರುದ್ಧ ಗ್ರಾಹಕರ ಆಕ್ರೋಶ

Update: 2016-11-19 00:06 IST

 ಮಂಗಳೂರು, ನ.18: ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಎದುರು ಬೆಳಗ್ಗೆಯಿಂದ ನಿಂತಿದ್ದ ಗ್ರಾಹಕರಿಗೆ, ಅಪರಾಹ್ನ 12:20ರವರೆಗೂ ಹಣ ಬಟವಾಡೆ ಮಾಡದ ಕಾರಣ ಬ್ಯಾಂಕ್ ವಿರುದ್ಧ ಗ್ರಾಹಕರು ಆಕ್ರೋಶಗೊಂಡ ಘಟನೆ ಶುಕ್ರವಾರ ನಡೆದಿದೆ. ಬೆಳಗ್ಗೆ ಸುಮಾರು 10ಗಂಟೆಯಿಂದ ಬ್ಯಾಂಕ್‌ನ ಎದುರು ಗ್ರಾಹಕರು ಹಣವನ್ನು ಡ್ರಾ ಮಾಡಲು ಸರದಿ ಸಾಲಲ್ಲಿ ನಿಂತಿದ್ದರೆನ್ನಲಾಗಿದೆ. ಬ್ಯಾಂಕ್ ಎಂದಿನಂತೆ 10 ಗಂಟೆಗೆ ತೆರೆದಿತ್ತಾದರೂ 12:20ರವರೆಗೂ ಸರದಿ ಸಾಲಲ್ಲಿ ನಿಂತಿದ್ದ ಗ್ರಾಹಕರು ಅಲ್ಲೇ ಬಾಕಿಯಾಗಿದ್ದು, ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದರೆ ಹಣ ಬರಲಿಲ್ಲ ಮ್ಯಾನೇಜರ್ ಹಣ ತರಲು ಹೋಗಿದ್ದಾರೆಂದು ಹೇಳಿದ್ದರೆನ್ನಲಾಗಿದೆ. ಬ್ಯಾಂಕ್ ಸಿಬ್ಬಂದಿಯ ಹೇಳಿಕೆಯಿಂದ 2 ತಾಸಿಗೂ ಹೆಚ್ಚು ಸರದಿಯಲ್ಲಿ ನಿಂತಿದ್ದ ಗ್ರಾಹಕರನ್ನು ಕೆರಳಿಸಿತ್ತು. ಇದರಿಂದಾಗಿ ಗ್ರಾಹಕರು ಬ್ಯಾಂಕ್‌ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಬ್ಯಾಂಕ್ ಖಾತೆದಾರರಿಗೂ ಹಣ ಇಲ್ಲ

ಗ್ರಾಹಕರಿಗೆ ವಾರದಲ್ಲಿ 24,000 ರೂ. ಡ್ರಾ ಮಾಡಲು ನಿಯಮ ಇದ್ದರೂ ಚೆಕ್ ತೆಗೆದುಕೊಂಡು ಹೋದಾಗ ಬೇಡಿಕೆಯಷ್ಟು ಹಣ ಕೊಡುವುದಿಲ್ಲ. 2,000 ರೂ. ತೆಗೆದುಕೊಳ್ಳುವಂತೆ ಹೇಳುತ್ತಾರೆ. ಬ್ಯಾಂಕ್‌ನ ಖಾತೆದಾರನೇ ಚೆಕ್‌ನಲ್ಲಿ ನಿರ್ದಿಷ್ಟ ಹಣವನ್ನು ನಮೂದಿಸಿದ್ದರೂ ಅಷ್ಟು ಹಣ ಇಲ್ಲ ಎನ್ನುತ್ತಾರೆ ಎಂದು ಬ್ಯಾಂಕ್‌ನ ಗ್ರಾಹಕ ನಾಸಿರ್ ಜೋಕಟ್ಟೆ ತಿಳಿಸಿದ್ದಾರೆ.

ಗ್ರಾಹಕರು ಕೇಳಿದಷ್ಟು ಹಣ ಇಲ್ಲ

ಗ್ರಾಹಕರು ಪ್ರತಿ ದಿನ ಬ್ಯಾಂಕ್‌ಗೆ ಬಂದು ವಾಪಾಸು ಹೋಗುತ್ತಿದ್ದಾರೆ. ಮೊದಲು ಬಂದ ಕೆಲವರಿಗೆ ಮಾತ್ರ ಹಣ ಸಿಗುತ್ತದೆ. ಮತ್ತೆ ಬಂದರೆ ಹಣ ಇಲ್ಲ ಎಂದು ಹೇಳುತ್ತಾರೆ. ಕ್ಯೂನಲ್ಲಿ ನಿಂತಿದ್ದ ಗ್ರಾಹಕರನ್ನು ನೋಡಿ ನಾನೇ ಜನ ಪ್ರತಿನಿಧಿಗಳನ್ನು ಸಂಪರ್ಕಿಸಿ ನಿತ್ಯ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದು, ಬ್ಯಾಂಕ್‌ಗೆ ಬರುವಂತೆ ಕೇಳಿಕೊಂಡಿದ್ದೇನೆ. ಕೂಡಲೇ ಮಂಗಳೂರು ತಾಪಂ ಸದಸ್ಯ ಬಶೀರ್ ಅಹ್ಮದ್, ಜೋಕಟ್ಟೆ ಗ್ರಾಪಂ ಉಪಾಧ್ಯಕ್ಷ ಸಂಶುದ್ದೀನ್ ಮತ್ತು ನಾನು ಈ ಬಗ್ಗೆ ಬ್ಯಾಂಕ್‌ನ ಮ್ಯಾನೇಜರ್‌ರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದೇವೆ. ಕೂಡಲೇ ಮ್ಯಾನೇಜರ್ ಹಣದ ಏರ್ಪಾಟು ಮಾಡಿದ್ದಾರೆ. ಪ್ರತಿ ಗ್ರಾಹಕನಿಗೆ 4,000 ರೂ.ವಿತರಿಸುವಂತೆ ನೋಡಿಕೊಂಡಿದ್ದೇವೆ ಎಂದು ಗ್ರಾಪಂ ಸದಸ್ಯ ಬಿ.ಎಚ್. ಮೊಯ್ದಿನ್ ಶರೀಫ್ ತಿಳಿಸಿದ್ದಾರೆ.

ಐಡಿ ತೋರಿಸಿದ್ರೂ ಕರೆನ್ಸಿ ಎಕ್ಸ್‌ಚೇಂಜ್ ಇಲ್ಲ

ಜನಸಾಮಾನ್ಯರ ಬಳಿ ಇದ್ದ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಐಡಿ ತೋರಿಸಿ ಬದಲಾಯಿಸಿಕೊಳ್ಳುವಂತೆ ಕೇಂದ್ರ ಸರಕಾರದ ಸೂಚನೆ ಇದ್ದರೂ ಬ್ಯಾಂಕ್‌ನವರು ಮೊದಲ ಎರಡು ದಿನಗಳು ಮಾತ್ರ ನಿಯಮವನ್ನ್ನು ಪಾಲಿಸಿದ್ದಾರೆ. ಆದರೆ, ಆನಂತರದ ದಿನಗಳಲ್ಲಿ ಐಡಿ ತೋರಿಸಿ ಹಳೆ ನೋಟು ಕೊಟ್ಟು ಹೊಸ ನೋಟು ಪಡೆಯಲು ಅವಕಾಶ ನೀಡಿ ವಾಪಸು ಕಳುಹಿಸಿದ್ದಾರೆ ಎಂದು ಬಶೀರ್ ಅಹ್ಮದ್ ಹೇಳಿದ್ದಾರೆ.

ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹಣ ಇಲ್ಲ ಎಂಬ ಸಬೂಬು ಹೇಳಿ ಗ್ರಾಹಕರನ್ನು ವಾಪಸು ಕಳುಹಿಸಲಾಗುತ್ತಿದೆ. ಬೆಳಗ್ಗೆ 10ರಿಂದ 11:30ರವರೆಗೆ ಮಾತ್ರ ಇಲ್ಲಿ ಹಣ ವಿತರಿಸಲಾಗುತ್ತದೆ. ಆದರೆ, ಗ್ರಾಹಕರು ಕೇಳಿದಷ್ಟಲ್ಲ. ಬ್ಯಾಂಕ್‌ನವರು ಹೇಳಿದಷ್ಟು ಮಾತ್ರ. ಬ್ಯಾಂಕ್‌ನ ಈ ಕ್ರಮದಿಂದ ಸುಸ್ತಾದ ಗ್ರಾಹಕರು ಇಂದು ನಮಗೆ ಕರೆ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ತಕ್ಷಣ ಸ್ಪಂದಿಸಿ ಸರದಿ ಸಾಲಲ್ಲಿ ನಿಂತಿದ್ದ ಯಾವ ಗ್ರಾಹಕನೂ ವಾಪಸು ಹೋಗದಂತೆ ಪ್ರತಿ ಗ್ರಾಹಕನಿಗೆ 4,000 ರೂ. ನಂತೆ ಬ್ಯಾಂಕ್ ಮೂಲಕ ವಿತರಣೆ ಮಾಡಿಸಿದ್ದೇವೆ.

* ತಾಪಂ ಸದಸ್ಯ ಬಶೀರ್ ಅಹ್ಮದ್

ಬ್ಯಾಂಕ್‌ನಲ್ಲಿರೋದು ಇಬ್ಬರೇ ಸಿಬ್ಬಂದಿ !

ಸುಮಾರು 200 ಮಂದಿಯಷ್ಟು ಗ್ರಾಹಕರು ಕ್ಯೂನಲ್ಲಿ ನಿಂತಿದ್ದರೂ ಬ್ಯಾಂಕ್‌ನಲ್ಲಿದ್ದುದು ಇಬ್ಬರೇ ಸಿಬ್ಬಂದಿ. ಗ್ರಾಹಕ ಕೇಳುವ ಮಾಹಿತಿಗೆ ಉತ್ತರಿಸುವವರು ಇಲ್ಲ ಎಂದು ಹೇಳಲಾಗಿದೆ. ಹಣ ಬಟವಾಡೆಯಲ್ಲೂ ಇಬ್ಬರು ಸಿಬ್ಬಂದಿ ಪರದಾಡಬೇಕಾಯಿತು. ಇದು ಕೂಡ ಕ್ಯೂನಲ್ಲಿ ನಿಂತಿದ್ದ ಗ್ರಾಹಕರನ್ನು ಕೆರಳಿಸಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News