ಕೇಂದ್ರದ ವಿರುದ್ಧ ಬಿಜೆಪಿ ಸಂಸದ ’ಶಾಟ್‌ಗನ್’ ದಾಳಿ

Update: 2016-11-19 03:38 GMT

ಹೊಸದಿಲ್ಲಿ, ನ.19: ಬಿಜೆಪಿಯ ನಿರ್ಧಾರಗಳನ್ನು ಪದೇಪದೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸುದ್ದಿಯಲ್ಲಿರುವ ಪಕ್ಷದ ಸಂಸದ ಹಾಗೂ ಹಿರಿಯ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಇದೀಗ ಮತ್ತೆ ಮೋದಿ ಸರ್ಕಾರದ ನೋಟು ಅಮಾನ್ಯ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕೇಂದ್ರ ಸರ್ಕಾರ ಸೂಕ್ತವಾಗಿ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಅನುಷ್ಠಾನದಲ್ಲಿ ಲೋಪವಾಗಿದೆ" ಎಂದು ಸಿನ್ಹಾ ಹೇಳಿದ್ದಾರೆ.
ಆದರೆ ಇದಕ್ಕೆ ನರೇಂದ್ರ ಮೋದಿಯವರನ್ನು ಟೀಕಿಸದೇ ಮೋದಿಯನ್ನು "ಕೆಚ್ಚೆದೆಯ ಹಾಗೂ ಕ್ರಿಯಾಶೀಲ ಮುಖಂಡ" ಎಂದು ಬಣ್ಣಿಸಿದ್ದಾರೆ. ಕಪ್ಪುಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ದಿಟ್ಟ ಹಾಗೂ ಸಕಾಲಿಕ ಹೆಜ್ಜೆ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಸರ್ಕಾರದ ನೋಟು ಅಮಾನ್ಯ ನಿರ್ಧಾರದ ಹಿಂದಿನ ಲೋಪಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ ಮೊಟ್ಟಮೊದಲ ಬಿಜೆಪಿ ಸಂಸದ ಇವರಾಗಿದ್ದಾರೆ.
"ಸರ್ಜಿಕಲ್ ದಾಳಿ ಮಾಡುವ ಮುನ್ನ ಅವರು, ಸರ್ಜಿಕಲ್ ದಾಳಿ ನಂತರದ ಯೋಜನೆಯನ್ನು ಸ್ಪಷ್ಟವಾಗಿ ಆಲೋಚಿಸಬೇಕಿತ್ತು. ಇದರ ಉದ್ದೇಶವೇನೋ ಒಳ್ಳೆಯದು. ಆದರೆ ಪ್ರಧಾನಿಗೆ ಈ ಸಲಹೆ ನೀಡಿದ ನಮ್ಮ ತಂಡ ಸೂಕ್ತ ಹೋಮ್‌ವರ್ಕ್ ಮಾಡಿಲ್ಲ. ಇಂಥವರ ಜಾತಕವನ್ನು ಈಗ ಬಯಲಿಗೆಳೆಯಬೇಕು. ಇದು ನಮ್ಮ ಕಡೆಯಿಂದ ಆದ ಗಂಭೀರ ಲೋಪ" ಎಂದು ಸಿನ್ಹಾ ಹೇಳಿದರು.
"ಇದರ ಅನುಷ್ಠಾನದಲ್ಲಿ ತಪ್ಪುಗಳಾಗಿವೆ. ಜನ ಬವಣೆಪಡುತ್ತಿದ್ದಾರೆ. ದೇಶದ ಅರ್ಥವ್ಯವಸ್ಥೆಯಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಹಿಂಸಾಚಾರ ಕೂಡಾ ಇದರಿಂದ ಭುಗಿಲೇಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕುಗಳ ಮುಂದೆ ಸರದಿಯಲ್ಲಿ ಇರುವವರು ಯಾರು? ನಮ್ಮ ಮತದಾರರು. ಅವರು ಬಡವರು ಹಾಗೂ ಮಧ್ಯಮವರ್ಗಕ್ಕೆ ಸೇರಿದವರು" ಎಂದು ಸಿನ್ಹಾ ವಿಶ್ಲೇಷಿಸಿದ್ದಾರೆ.
ತಪ್ಪನ್ನು ತಿದ್ದಿಕೊಂಡು ತಕ್ಷಣ ಪರಿಹಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ, ಪಕ್ಷದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಮತದಾರರ ಮನವೊಲಿಸುವುದು ಕಷ್ಟ. ಕೇಂದ್ರ ಸರ್ಕಾರದ ಈ ನಡೆಯಿಂದ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ನೋಟು ಅಮಾನ್ಯ ನಿರ್ಧಾರದಿಂದಾಗುವ ಲಾಭದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸಂಸದರು ಜನರ ಬಳಿ ಹೋಗಬೇಕು ಎಂದು ಬಿಜೆಪಿ ತನ್ನ ಎಲ್ಲ ಸಂಸದರಿಗೆ ಸೂಚನೆ ನೀಡಿರುವ ಬೆನ್ನಲ್ಲೇ ಶತ್ರುಘ್ನ ಸಿನ್ಹಾ ಈ ವಾಗ್ದಾಳಿ ಮಾಡಿದ್ದಾರೆ.
ಬಂಡವಾಳ ಹಿಂತೆಗೆತ ಖಾತೆಯ ಬಗ್ಗೆ ಮಾಜಿ ಸಚಿವ ಅರುಣ್ ಶೌರಿ, ಸಂಸದ ಸುಬ್ರಹ್ಮಣ್ಯನ್‌ಸ್ವಾಮಿ, ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ, ಹಿರಿಯ ಮುಖಂಡರಾದ ಮುರಳಿ ಮನೋಹರ ಜೋಶಿ, ಎನ್.ಕೆ.ಆಡ್ವಾಣಿಯವರಂಥ ಪಕ್ಷದ ಹಿತೈಷಿಗಳ ಸಲಹೆ ಪಡೆದು ಪರಿಹಾರ ಸೂತ್ರ ರೂಪಿಸುವುದು ತಕ್ಷಣದ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News